ಆರ್ಥಿಕ ಚಟುವಟಿಕೆಗಳ ಕುಸಿತದ ಸ್ಪಷ್ಟ ಸಂಕೇತ:ಆರ್‌ಬಿಐ ಗವರ್ನರ್

Update: 2019-06-20 18:12 GMT

ಹೊಸದಿಲ್ಲಿ,ಜೂ.20: ಭಾರತದ ಅರ್ಥವ್ಯವಸ್ಥೆಯು ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸ್ವಷ್ಟ ಸಂಕೇತಗಳು ಕಂಡು ಬರುತ್ತಿವೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ನಿರ್ಣಾಯಕ ಹಣಕಾಸು ನೀತಿಯ ಅಗತ್ಯವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ. ಜೂ.3ರಿಂದ 6ರವರೆಗೆ ನಡೆದಿದ್ದ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಸಭೆಯಲ್ಲಿ ಶೇ.0.25ರಷ್ಟು ಬಡ್ಡಿದರ ಕಡಿತದ ಪರವಾಗಿ ಮತವನ್ನು ಚಲಾಯಿಸಿದ ಸಂದರ್ಭ ದಾಸ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 ಆರ್‌ಬಿಐ ಸಭೆಯ ನಡಾವಳಿಗಳನ್ನು ಗುರುವಾರ ಬಿಡುಗಡೆಗೊಳಿಸಿದ್ದು,ಕಳೆದ ಎಪ್ರಿಲ್‌ನಲ್ಲಿ ನಡೆದಿದ್ದ ಹಿಂದಿನ ಸಭೆಯ ಬಳಿಕ ರೂಪುಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಸ್ಥಿತಿಯ ಕುರಿತು ಹೆಚ್ಚಿನ ಸ್ಪಷ್ಟತೆಯು ಮೂಡಿದೆ ಎಂದು ದಾಸ್ ಹೇಳಿದ್ದಾರೆ.

ಹಿಂದಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರವು ಶೇ.5.8ಕ್ಕೆ ತಗ್ಗಿರುವುದರೊಂದಿಗೆ ಆರ್ಥಿಕ ಚಟುವಟಿಕೆಗಳು ಕುಸಿಯುತ್ತಿವೆ ಎನ್ನುವುದಕ್ಕೆ ಸ್ಪಷ್ಟ ಸಂಕೇತವು ಕಂಡು ಬರುತ್ತಿದೆ ಎಂದಿರುವ ಅವರು, ಒಟ್ಟಾರೆಯಾಗಿ ಹೆಳಬೇಕೆಂದರೆ ಬೆಳವಣಿಗೆಯ ಆವೇಗವು ಸ್ಪಷ್ಟವಾಗಿ ನಿಧಾನಗೊಂಡಿದ್ದರೆ,ಕಳೆದ ಎರಡು ದರಕಡಿತಗಳ ನಂತರದ ನಿರೀಕ್ಷಿತ ಪ್ರಸರಣವನ್ನು ಪರಿಗಣಿಸಿದರೂ 2019-20ರ ಉದ್ದಕ್ಕೂ ಹಣದುಬ್ಬರವು ಶೇ.4ರ ಕೆಳಗೇ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಸ್ಥಿತಿಗಳ ಹಿನ್ನೆಲೆಯಲ್ಲಿ ನಿರ್ಣಾಯಕ ಹಣಕಾಸು ನೀತಿ ಕ್ರಮವು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News