ಚರ್ಚೆಗೆ ಗ್ರಾಸವಾದ ಅಫ್ಘಾನ್ ಕ್ರಿಕೆಟಿಗ ಶಾಹಿದಿ ನಿರ್ಧಾರ

Update: 2019-06-20 18:47 GMT

ಸೌತಂಪ್ಟನ್, ಜೂ.20: ಬೌಲರ್ ಎಸೆದ ಬೌನ್ಸರ್ ತನ್ನ ತಲೆಗೆ ಬಡಿದರೂ ಅದನ್ನು ನಿರ್ಲಕ್ಷಿಸಿ ಆಟ ಮುಂದುವರಿಸಿದ ಅಫ್ಘಾನಿಸ್ತಾನದ ಆಟಗಾರ ಹಶ್ಮತುಲ್ಲ ಶಾಹಿದಿಯ ನಿರ್ಧಾರ ಕ್ರಿಕೆಟ್ ಲೋಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆಟಗಾರರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕೇ ಎಂಬ ಬಗ್ಗೆ ಸದ್ಯ ಕ್ರಿಕೆಟ್ ಪರಿಣತರು ಚರ್ಚಿಸುತ್ತಿದ್ದಾರೆ.

 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾರ್ಕ್ ವುಡ್ ಎಸೆದ ಬೌನ್ಸರ್ ಶಾಹಿದಿಯ ಹೆಲ್ಮೆಟ್‌ಗೆ ಬಡಿದ ಪರಿಣಾಮ ಅದು ಚೂರಾಗಿ ಶಾಹೀದಿ ನೆಲಕ್ಕೆ ಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಸಿಬ್ಬಂದಿ ಶಾಹಿದಿಗೆ ಮೈದಾನದಿಂದ ಹೊರನಡೆಯುವಂತೆ ಮನವಿ ಮಾಡಿದ್ದರು. ಆದರೆ ಅವರ ಮನವಿಗೆ ಒಪ್ಪದ 24ರ ಹರೆಯದ ಯುವ ಆಟಗಾರ ತಮ್ಮ ಆಟ ಮುಂದುವರಿಸಿದ್ದಾರೆ ಮತ್ತು ತಂಡಕ್ಕಾಗಿ ಗರಿಷ್ಠ ರನ್ ಕಲೆ ಹಾಕಿದ್ದಾರೆ. ಶಾಹಿದಿ ಪ್ರಯತ್ನದ ಹೊರತಾಗಿಯೂ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲುಂಡಿತ್ತು.

ತನ್ನ ತಾಯಿ ಚಿಂತೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ನಾನು ವೈದ್ಯಕೀಯ ಸಲಹೆಯನ್ನು ಕಡೆಗಣಿಸಿದ್ದೆ ಎಂದು ಶಾಹಿದಿ ನಂತರ ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಆಟಗಾರರು ವೈದ್ಯರ ಸಲಹೆಗಳನ್ನು ಪಾಲಿಸಬೇಕು ಮತ್ತು ನಿಯಮಗಳಿಗೆ ಅಂಟಿಕೊಂಡಿರಬೇಕು. ತಂಡದ ಪರ ಕರ್ತವ್ಯದ ಭಾವನೆಯಿಂದ ಅತಿರೇಕ ಮಾಡಲು ಹೋದರೆ ಆಗುವ ಪರಿಣಾಮಗಳು ಗಂಭೀರ ಮತ್ತು ಜೀವನಪೂರ್ತಿ ಪಶ್ಚಾತ್ತಾಪಪಡುವಂತಿರಬಹುದು. ಇಂತಹ ನಿರ್ಧಾರಗಳನ್ನು ಆಟಗಾರರ ಕೈಗೆ ಬಿಡಬಾರದು. ವೈದ್ಯರು ಮೈದಾನದಿಂದ ಹೊರನಡೆಯಿರಿ ಎಂದು ಹೇಳಿದರೆ ಎಲ್ಲ ಆಟಗಾರರೂ ಅದನ್ನು ಪಾಲಿಸಬೇಕು. ಅದರಲ್ಲಿ ಯಾವುದೇ ಚರ್ಚೆ ಇರಬಾರದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News