ವಿಜಯ ಶಂಕರ್‌ಗೆ ಗಾಯದ ಭೀತಿ

Update: 2019-06-20 18:48 GMT

ಸೌತಾಂಪ್ಟನ್, ಜೂ.20: ಆಲ್‌ರೌಂಡರ್ ವಿಜಯ ಶಂಕರ್ ಭಾರತೀಯ ಪಾಳಯದಲ್ಲಿ ಗಾಯದ ಭೀತಿಗೆ ಒಳಗಾದ ಹೊಸ ಆಟಗಾರರಾಗಿದ್ದಾರೆ. ಬುಧವಾರ ಮಳೆಬಾಧಿತ ತಂಡದ ಅಭ್ಯಾಸದ ವೇಳೆ ಶಂಕರ್ ಕಾಲ್ಬೆರಳಿಗೆ ಚೆಂಡು ಬಡಿದು ಗಾಯವಾಗಿದೆ.

ಬುಧವಾರ ನೆಟ್ ಪ್ರಾಕ್ಟೀಸ್ ವೇಳೆ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರ ಯಾರ್ಕರ್ ಎಸೆತವೊಂದು ಶಂಕರ್ ಕಾಲ್ಬೆರಳಿಗೆ ಅಪ್ಪಳಿಸಿದೆ. ಆಗ ಅವರಿಗೆ ನೋವು ಕಾಣಿಸಿಕೊಂಡಿತು. ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

‘‘ಹೌದು, ವಿಜಯ್‌ಗೆ ಕಾಲ್ಬೆರಳಿಗೆ ಚೆಂಡು ಬಡಿದು ನೋವಾಗಿದೆ. ಇದರಿಂದ ಚಿಂತಿಸುವ ಅಗತ್ಯವಿಲ್ಲ’’ ಎಂದು ಮೂಲಗಳು ತಿಳಿಸಿವೆ.

ಶಂಕರ್ ಭಾರತದ ಬ್ಯಾಟಿಂಗ್ ಸರದಿಯಲ್ಲಿ ನಾಲ್ಕನೇ ಕ್ರಮಾಂಕಕ್ಕೆ ನಿಯೋಜಿತಗೊಂಡಿರುವ ಆಟಗಾರನಾಗಿದ್ದಾರೆ. ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಶಂಕರ್ ಪಾಕಿಸ್ತಾನ ವಿರುದ್ಧ ರವಿವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ನಾಯಕ ಸರ್ಫರಾಝ್ ಅಹ್ಮದ್ ಸಹಿತ ಪಾಕ್‌ನ ಇಬ್ಬರು ದಾಂಡಿಗರನ್ನು ಔಟ್ ಮಾಡಿದ್ದರು.

ಆರಂಭಿಕ ಆಟಗಾರ ಶಿಖರ್ ಧವನ್ ಹೆಬ್ಬೆರಳ ಮೂಳೆ ಮುರಿತಕ್ಕೊಳಗಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.ಸ್ನಾಯು ಸೆಳೆತದಿಂದ ಬಳಲುತ್ತಿರುವ ವೇಗದ ಬೌಲರ್ ಭುವನೇಶ್ವರ ಕುಮಾರ್ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಇದೀಗ ಶಂಕರ್ ಗಾಯಗೊಂಡಿರುವುದು ಭಾರತ ಪಾಳಯದಲ್ಲಿ ಆತಂಕ ಹೆಚ್ಚಿಸಿದೆ.

ಭುವನೇಶ್ವರ್ ಎಂಟು ದಿನಗಳ ಕಾಲ ಬೌಲಿಂಗ್ ಮಾಡುವಂತಿಲ್ಲ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News