ಭಾರತದ ಎನ್‌ಎಸ್‌ಜಿ ಕನಸಿಗೆ ಮತ್ತೆ ಚೀನಾ ಅಡ್ಡಗಾಲು ?

Update: 2019-06-22 03:51 GMT

ಬೀಜಿಂಗ್: ಅಣ್ವಸ್ತ್ರ ಸರಬರಾಜುದಾರರ ಗುಂಪು (ಎನ್‌ಎಸ್‌ಜಿ) ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಗಳಿಗೆ ಚೀನಾ ಮತ್ತೆ ಅಡ್ಡಗಾಲು ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ವಿಧಿವಿಧಾನ ಸಮಸ್ಯೆಯನ್ನು ನೆಪವಾಗಿಟ್ಟುಕೊಂಡು ಚೀನಾ ಮತ್ತೆ ತಗಾದೆ ತೆಗೆದಿದೆ. ಕಝಖಿಸ್ತಾನದ ಆಸ್ತಾನಾದಲ್ಲಿ ನಡೆದ ಎನ್‌ಎಸ್‌ಜಿ ಸದಸ್ಯ ದೇಶಗಳ ಪ್ರತಿನಿಧಿಗಳ ಸಭೆಯ ಬಗ್ಗೆ ಚೀನಾ ವಿದೇಶಾಂತ ಸಚಿವಾಲಯ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಈ ಸ್ಪಷ್ಟ ಸೂಚನೆ ದೊರಕಿದೆ.

"ಕೆಲ ನಿರ್ದಿಷ್ಟ ಸದಸ್ಯರು ತಡೆಯುವ ಪ್ರಶ್ನೆಯೇ ಇಲ್ಲ; ಏಕೆಂದರೆ ಎನ್‌ಎಸ್‌ಜಿ ಯಲ್ಲಿ ಕೆಲ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಸದಸ್ಯರು ವಿಧಿವಿಧಾನಗಳಿಗೆ ಅನುಸಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಂಗ್ ಹೇಳಿದ್ದಾರೆ.

48 ಸದಸ್ಯರ ಎನ್‌ಎಸ್‌ಜಿಗೆ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತ ಸದಸ್ಯತ್ವ ಪಡೆಯುವುದು ಅಸಾಧ್ಯ ಎಂದೂ ಲೂ ಭವಿಷ್ಯ ನುಡಿದಿದ್ದಾರೆ. ಭಾರತದ ಸದಸ್ಯತ್ವ ಪ್ರತಿಪಾದನೆಯನ್ನು ಪಾಕಿಸ್ತಾನದ ಜತೆಗೆ ಸೇರಿಸುವ ಮೂಲಕ ತನ್ನ ನಿಕಟವರ್ತಿ ದೇಶ ಕೂಡಾ ಸದಸ್ಯತ್ವ ಪಡೆಯುವಂತೆ ಚೀನಾ ತಂತ್ರ ಹೂಡುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News