ಮೊಗ್ಯಾಂಬೋ ಖ್ಯಾತಿಯ ಅಮರೀಶ್ ಪುರಿ ಮೊದಲು ನಾಯಕನಾಗಿದ್ದು ಕನ್ನಡದ ಚಿತ್ರದಲ್ಲಿ !

Update: 2019-06-22 04:32 GMT

ಖ್ಯಾತ ನಟ ಅಮರೀಶ್ ಪುರಿ ಬಾಲಿವುಡ್ ನಟರೆಂದೇ ಹೆಚ್ಚಾಗಿ ಗುರುತಿಸಲ್ಪಟ್ಟವರು. ಮಿ. ಇಂಡಿಯಾ ಚಿತ್ರದ ಅವರ ಮೊಗ್ಯಾಂಬೋ ಪಾತ್ರ ಅವರಿಗೆ ಭಾರೀ ಖ್ಯಾತಿ ತಂದು ಕೊಟ್ಟಿತ್ತು. 

ಆದರೆ ಈ ಅಪ್ರತಿಮ ನಟ ತನ್ನ ವೃತ್ತಿ ಜೀವನದ ಆರಂಭದಲ್ಲಿ ಕನ್ನಡದ ಚಿತ್ರವೊಂದರಲ್ಲಿ ನಾಯಕ ನಟನಾಗಿ ನಟಿಸಿ ಗಮನ ಸೆಳೆದಿದ್ದರೂ ಇಂದು ಹೆಚ್ಚಿನವರಿಗೆ ಗೊತ್ತಿಲ್ಲ.

ಇಂದು ದಿವಂಗತ ಅಮರೀಶ್ ಪುರಿಯವರ ಜನ್ಮದಿನದಂದು ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಕೊಟ್ಟಿದೆ. ಈ ಬಗ್ಗೆ ಖ್ಯಾತ ಲೆಖಕ ಡಾ. ಕೆ. ಪುಟ್ಟಸ್ವಾಮಿ ಅವರು ಅಮರೀಶ್ ಪುರಿಯ ಕನ್ನಡ ಚಿತ್ರದ ಬಗ್ಗೆ ಫೇಸ್ ಬುಕ್ ಪೋಸ್ಟ್ ಬರೆದಿದ್ದಾರೆ.

ಅದು ಇಲ್ಲಿದೆ

ಗೂಗಲ್ ಇಂದು ತನ್ನ ಮುಖಪುಟದಲ್ಲಿ ನಟ ಅಮರೀಶ್ ಪುರಿ ಅವರಿಗೆ ಗೌರವ ಸಲ್ಲಿಸಿದೆ.

ಅಮರೀಶ್ ಪುರಿ ಅವರು ಹಿಂದೀ ಚಿತ್ರರಂಗದಲ್ಲಿ ಪ್ರಸಿದ್ಧರಾಗುವ ಮೊದಲು ಕನ್ನಡದ ಕಾಡುಚಿತ್ರದ ನಾಯಕ ಪಾತ್ರದಲ್ಲಿ ನಟಿಸಿದ್ದರು. ಅವರ ಗಡಸು ಮುಖ, ಅದಕ್ಕೊಪ್ಪುವ ಸುಂದರ ಕೃಷ್ಣ ಅರಸರ ಕಂಚಿನ ಕಂಠ ಕಾಡು ಚಿತ್ರದ ಗೌಡ ಪಾತ್ರ ಜೀವ ಪಡೆದಂತಿತ್ತು.

ಗಂಡಭೇರುಂಡ, ಸಿಂಹದ ಮರಿ ಸೈನ್ಯ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಅವರು ನಟಿಸಿದ ಇತರ ಚಿತ್ರಗಳು. ಮಿ.ಇಂಡಿಯ ಚಿತ್ರದ ಮೊಗ್ಯಾಂಬೋ ಖುಶ್ ಹುವಾ ಡೈಲಾಗ್ ಆವರಿಗೆ ಚಿತ್ರಜಗತ್ತಿನಲ್ಲಿ ದಂತಕತೆಯಾಗಿದ್ದ ಗಬ್ಬಾರ್ ಸಿಂಗ್ ಡೈಲಾಗ್ ಗಳು ಮಂಕಾಗುವಷ್ಟು ಧ್ವನಿಪೂರ್ಣವಾಗಿತ್ತು. ಅಲ್ಲಿಂದಾಚೆಗೆ ಅವರ ಯಶಸ್ಸು ಶಿಖರ ಮುಟ್ಟಿತು.

ಹಿಂದೀ, ತೆಲುಗು ಚಿತ್ರದ ಬೇಡಿಕೆಯ ಖಳರಾದರು. ತಮ್ಮ ಇಂಡಿಯಾನ ಜೋನ್ಸ್ ಆ್ಯಂಡ್ ಟೆಂಪಲ್ ಆಫ್ ದ ಡೂಂ ಚಿತ್ರದಲ್ಲಿ ಕಾಳಿಯ ಪೂಜಾರಿಯ ಪಾತ್ರದಲ್ಲಿ ನಟಿಸಿದ ಅಮರೀಶ್ ಪುರಿ ಅವರ ಅಭಿನಯ ಕಂಡ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ " ಅಮರೀಶ್ ಖಳನ ಪಾತ್ರ ನಿರ್ವಹಿಸುವ ನಟರಲ್ಲಿ ಜಗತ್ತಿನ ಶ್ರೇಷ್ಠ ಕಲಾವಿದ" ಎಂದು ಉದ್ಗರಿಸಿದರು.

ನಿಜ. ಆದರೆ ಪ್ರಸಿದ್ಧಿಗೆ ಬರುವ ಮುನ್ನ ಅವರು ಶ್ಯಾಮ್ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕ, ನಿಹಲಾನಿ ಅವರ ಆಕ್ರೋಶ್ ಚಿತ್ರಗಳಲ್ಲಿ ತಮ್ಮ ಅಭಿನಯದ ವಿರಾಟ್ ಸ್ವರೂಪ ಪ್ರದರ್ಶಿಸಿದ್ದಾಗಲೀ, ಮರಾಠಿ, ಹಿಂದೀ ರಂಗಭೂಮಿಯಲ್ಲಿ ಅಭಿನಯಿಸಿದ ಅಮೋಘ ಪಾತ್ರಗಳಾಗಲೀ ನೆನಪಾಗದಷ್ಟು ಮೊಗ್ಯಾಂಬೋ ಪಾತ್ರ ಅವರನ್ನು ಒಂದು ಸ್ಟೀರಿಯೊಟೈಪ್ ಪಾತ್ರಕ್ಕೆ ಮಿತಿಗೊಳಿಸಿಬಿಟ್ಟಿತು.

ಸ್ಟಾರ್ ಪಟ್ಟ ಕಲಾವಿದನಿಗೆ ತೊಡಿಸುವ ಸಂಕಲೆಯನ್ನು ಬಿಡಿಸಿಕೊಳ್ಳುವುದು ಕಡುಕಷ್ಟ. ಅದೇನೆ ಇರಲಿ ಈಗ ನಮ್ಮ ನಡುವೆ ಇಲ್ಲದ ಈ ಅಮರ ಕಲಾವಿದನ 87ನೇ ಜನ್ಮ ದಿನದ ಸಂದರ್ಭದಲ್ಲಿ ನೆನಪು ಮಾಡಿಕೊಂಡ ಗೂಗಲ್ ನ ಜೊತೆ ನಮ್ಮದೂ ನಮನಗಳು ಸೇರಲಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News