ಅಮೆರಿಕ ರಕ್ಷಣಾ ಕಾರ್ಯದರ್ಶಿಯಾಗಿ ಮಾರ್ಕ್ ಎಸ್ಪರ್ ನೇಮಿಸಿದ ಟ್ರಂಪ್

Update: 2019-06-22 18:24 GMT

ವಾಶಿಂಗ್ಟನ್, ಜೂ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಮಾರ್ಕ್ ಎಸ್ಪರ್‌ರನ್ನು ನೇಮಿಸಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ.

ಅರೇಬಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಖಾಲಿಯಿದ್ದ ಹುದ್ದೆಯನ್ನು ಟ್ರಂಪ್ ತುಂಬಿದ್ದಾರೆ.

ಸೇನಾ ಕಾರ್ಯದರ್ಶಿಯಾಗಿದ್ದ ಎಸ್ಪರ್‌ರನ್ನು ಈ ವಾರವಷ್ಟೇ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿತ್ತು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಜೇಮ್ಸ್ ಮ್ಯಾಟಿಸ್ ರಾಜೀನಾಮೆ ನೀಡಿದ ಬಳಿಕ ಪೂರ್ಣ ಪ್ರಮಾಣದ ರಕ್ಷಣಾ ಕಾರ್ಯದರ್ಶಿಯಿರಲಿಲ್ಲ. ಎಸ್ಪರ್ ನೇಮಕಕ್ಕೆ ಸೆನೆಟ್ ಅಂಗೀಕಾರ ನೀಡಬೇಕಾಗಿದೆ.

ಇದಕ್ಕೂ ಮುನ್ನ ಪ್ಯಾಟ್ರಿಕ್ ಶಾನಹನ್ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನೇ ಖಾಯಂ ರಕ್ಷಣಾ ಕಾರ್ಯದರ್ಶಿಯಾಗಿ ನೇಮಿಸಲು ಟ್ರಂಪ್ ಮುಂದಾಗಿದ್ದರು. ಆದರೆ, ಅವರ ವಿರುದ್ಧ ಗೃಹ ಹಿಂಸೆಗೆ ಸಂಬಂಧಿಸಿದ ಆರೋಪಗಳು ಮುನ್ನೆಲೆಗೆ ಬಂದ ಬಳಿಕ ರಕ್ಷಣಾ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷೆಯನ್ನು ತೊರೆದಿದ್ದರು.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬೇಹುಗಾರಿಕಾ ಡ್ರೋನ್ ಒಂದನ್ನು ಇರಾನ್ ಈ ವಾರ ಹೊಡೆದುರುಳಿಸಿದ ಬಳಿಕ ಅಲ್ಲಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಈ ಹಿನ್ನೆಲೆಯಲ್ಲಿ, ಟ್ರಂಪ್ ತುರ್ತಾಗಿ ಪೂರ್ಣಕಾಲಿಕ ರಕ್ಷಣಾ ಕಾರ್ಯದರ್ಶಿಯೊಬ್ಬರನ್ನು ನೇಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News