ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಅಂತಿಮ ಸುತ್ತಿಗೆ ಭಾರತ ಮಹಿಳಾ ತಂಡ ಅರ್ಹ

Update: 2019-06-22 18:37 GMT

ಹಿರೊಶಿಮಾ, ಜೂ.22: ಎಫ್‌ಐಎಚ್ ಸಿರೀಸ್ ಫೈನಲ್ಸ್ ನಲ್ಲಿ ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಕೆಳ ರ್ಯಾಂಕಿನ ಚಿಲಿ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಭಾರತೀಯ ಮಹಿಳಾ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿದೆ.

ಚಿಲಿ 18ನೇ ನಿಮಿಷದಲ್ಲಿ ಕರೊಲಿನಾ ಗಾರ್ಸಿಯಾ ಗಳಿಸಿದ ಗೋಲಿನಿಂದ 1-0 ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತು. 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಬಾರಿಸಿದ ಗೋಲಿನ ನೆರವಿನಿಂದ ತಿರುಗೇಟು ನೀಡಿದ ಭಾರತ ಮೊದಲಾರ್ಧದ ಅಂತ್ಯಕ್ಕೆ 1-1 ರಿಂದ ಸಮಬಲ ಸಾಧಿಸಿತು.

ನವನೀತ್ ಕೌರ್(31ನೇ ನಿಮಿಷ) ಹಾಗೂ ಗುರ್ಜಿತ್ ಕೌರ್ 37ನೇ ನಿಮಿಷದಲ್ಲಿ ಗಳಿಸಿದ ಎರಡನೇ ಗೋಲು ನೆರವಿನಿಂದ ಭಾರತ 3-1 ಮುನ್ನಡೆ ಸಾಧಿಸಿತು.

ಮ್ಯಾನುಯೆಲಾ ಉರೊಝ್ 43ನೇ ನಿಮಿಷದಲ್ಲಿ ಚಿಲಿ ಪರ ಎರಡನೇ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 3-2ಕ್ಕೆ ಕಡಿತಗೊಳಿಸಿದರು. 57ನೇ ನಿಮಿಷದಲ್ಲಿ ಗೋಲು ಗಳಿಸಿದ ಭಾರತದ ನಾಯಕಿ ರಾಣಿ ರಾಂಪಾಲ್ ದಕ್ಷಿಣ ಅಮೆರಿಕ ತಂಡ ಚಿಲಿ ಕೈಯಿಂದ ಪಂದ್ಯವನ್ನು ದೂರಕ್ಕೆ ಸೆಳೆದರು.

ರವಿವಾರ ನಡೆಯ ಲಿರುವ ಫೈನಲ್‌ನಲ್ಲಿ ಭಾರತ ಮತ್ತೊಂದು ಸೆಮಿಫೈನಲ್ ನಲ್ಲಿ ಜಯ ಸಾಧಿಸಲಿರುವ ರಶ್ಯ ಅಥವಾ ಜಪಾನ್ ತಂಡವನ್ನು ಎದುರಿಸಲಿದೆ. ಈ ಟೂರ್ನಮೆಂಟ್‌ನ ಅಗ್ರ-2 ತಂಡಗಳು ಈ ವರ್ಷಾಂತ್ಯದಲ್ಲಿ ನಡೆಯುವ 2020ರ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಅಂತಿಮ ಸುತ್ತಿನ ಪಂದ್ಯಕ್ಕೆ ಅರ್ಹತೆ ಪಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News