2022ರ ಕಾಮನ್‌ವೆಲ್ತ್ ಗೇಮ್ಸ್ ಬಹಿಷ್ಕರಿಸಲು ಭಾರತ ಚಿಂತನೆ

Update: 2019-06-22 18:39 GMT

ಹೊಸದಿಲ್ಲಿ, ಜೂ.22: ಗೇಮ್ಸ್ ಕಾರ್ಯಕ್ರಮ ಪಟ್ಟಿಯಲ್ಲಿ ಶೂಟಿಂಗ್ ಹಾಗೂ ಆರ್ಚರಿ(ರಿಕರ್ವ್) ಸ್ಪರ್ಧೆಗಳನ್ನು ಹೊರಗಿಟ್ಟಿರುವುದನ್ನು ಪ್ರತಿಭಟಿಸಿ ಭಾರತ 2022ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲು ಗಂಭೀರ ಚಿಂತನೆ ನಡೆಸಬೇಕಾಗುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಎಚ್ಚರಿಸಿದ್ದಾರೆ.

ಐಒಎ ಈ ಕುರಿತಂತೆ ಇನ್ನು ಒಂದು ತಿಂಗಳಲ್ಲಿ ಅಥವಾ ದಿಲ್ಲಿಯಲ್ಲಿ ನಡೆಯುವ ಕಾರ್ಯಕಾರಿ ಕೌನ್ಸಿಲ್‌ನಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜೀವ್ ಹೇಳಿದ್ದಾರೆ.

 ‘‘ಕಾಮನ್‌ವೆಲ್ ಗೇಮ್ಸ್‌ನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ನಾವು ಗಂಭೀರ ಚಿಂತನೆ ನಡೆಸುತ್ತಿದ್ದೇವೆ. ಈ ನಿರ್ಧಾರದಿಂದ ಭಾರತಕ್ಕೆ ಭಾರೀ ನಷ್ಟವಾಗಲಿದೆ. ಕಾಮನ್‌ವೆಲ್ತ್‌ನಲ್ಲಿ ಶೂಟಿಂಗ್ ಸ್ಪರ್ಧೆಯು ನಮಗೆ ಪದಕ ಗೆಲ್ಲುವ ಪ್ರಮುಖ ಮೂಲವಾಗಿದೆ. ಈ ಕ್ರೀಡೆಗೆ ಶ್ರೀಮಂತ ಇತಿಹಾಸವಿದೆ. ಹೌದು, ಈ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂದು ನಮಗೆ ಗೊತ್ತಿದೆ. ಮುಂದಿನ ತಿಂಗಳು ಸಭೆ ನಡೆಸಲಿರುವ ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟದ ಸದಸ್ಯರುಗಳು ಈ ಕುರಿತು ಗಮನ ಹರಿಸಬೇಕು. ಮುಂದೇನಾಗುತ್ತದೆ ಕಾದು ನೋಡೋಣ’’ ಎಂದು ಮೆಹ್ತಾ ಹೇಳಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟದ ಕಾರ್ಯಕಾರಿ ಮಂಡಳಿ ಗುರುವಾರ 2022ರ ಆವೃತ್ತಿಯ ಗೇಮ್ಸ್‌ನಿಂದ ಶೂಟಿಂಗ್ ಹಾಗೂ ಆರ್ಚರಿ(ರಿಕರ್ವ್)ಕ್ರೀಡೆಗಳನ್ನು ಕೈಬಿಡುವುದಕ್ಕೆ ಶಿಫಾರಸು ಮಾಡಿತ್ತು.

2018ರ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 7 ಚಿನ್ನ ಸಹಿತ 16 ಪದಕಗಳನ್ನು ಜಯಿಸಿದ್ದರು. ಕಾಮನ್‌ವೆಲ್ತ್ 2 ಆವೃತ್ತಿಯಲ್ಲಿ ಮಾತ್ರವಿದ್ದ ಆರ್ಚರಿ ಸ್ಪರ್ಧೆಯಲ್ಲಿ 2010ರ ದಿಲ್ಲಿ ಗೇಮ್ಸ್ ನಲ್ಲಿ ಭಾರತ 3 ಚಿನ್ನ ಸಹಿತ 8 ಪದಕ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News