ಆರ್‌ಬಿಐ ಸಹಾಯಕ ಗವರ್ನರ್ ವಿರಲ್ ಆಚಾರ್ಯ ಅಧಿಕಾರದ ಅವಧಿ ಮುಗಿಯುವ 6 ತಿಂಗಳ ಮೊದಲೇ ರಾಜೀನಾಮೆ

Update: 2019-06-24 16:16 GMT

ಹೊಸದಿಲ್ಲಿ, ಜೂ.24: ಸೇವಾವಧಿ ಕೊನೆಗೊಳ್ಳುವ ಮೊದಲೇ ಆರ್‌ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ತಮ್ಮ ಹುದ್ದೆ ತೊರೆದಿದ್ದಾರೆ.

ಅನಿವಾರ್ಯ ವೈಯಕ್ತಿಕ ಕಾರಣಗಳಿಂದಾಗಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರಿಸರ್ವ್ ಬ್ಯಾಂಕಿಗೆ ಬರೆದಿರುವ ಪತ್ರದಲ್ಲಿ ಆಚಾರ್ಯ ತಿಳಿಸಿದ್ದಾರೆ. ಅವರ ಸೇವಾವಧಿ ಮುಂದಿನ ಫೆಬ್ರವರಿಗೆ ಅಂತ್ಯವಾಗಲಿತ್ತು. ಅವರ ಪತ್ರದ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಸಕ್ಷಮ ಪ್ರಾಧಿಕಾರ ಪರಿಗಣಿಸುತ್ತಿದೆ ಎಂದು ಆರ್‌ಬಿಐ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

 ಆರ್‌ಬಿಐ ಕಾರ್ಯನಿರ್ವಹಣೆಯ ಬಗ್ಗೆ ವಿರಲ್ ಆಚಾರ್ಯ ಈ ಹಿಂದೆ ಕೆಲವು ಬಾರಿ ಸಾರ್ವಜನಿಕವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

    ಆರ್‌ಬಿಐ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ 2018ರ ಡಿಸೆಂಬರ್‌ನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಸರಕಾರದೊಂದಿಗೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ವಿರಲ್ ಆಚಾರ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಆರ್‌ಬಿಐಯ ಸ್ವಾಯತ್ತತೆಗೆ ಎದುರಾಗಲಿರುವ ಸಂಭಾವ್ಯ ಅಪಾಯದ ಬಗ್ಗೆ ಎಚ್ಚರಿಸಿದ್ದರು. ರಿಸರ್ವ್ ಬ್ಯಾಂಕ್‌ನ ಸ್ವಾತಂತ್ರವನ್ನು ಗೌರವಿಸದ ಸರಕಾರಗಳು ಪ್ರಧಾನ ನಿಯಂತ್ರಕ ಸಂಸ್ಥೆಯನ್ನು ಕಡೆಗಣಿಸಿದ ಬಗ್ಗೆ ಒಂದಲ್ಲ ಒಂದು ದಿನ ಪಶ್ಚಾತ್ತಾಪ ಪಡಲಿವೆ ಎಂದು ಆಚಾರ್ಯ ಹೇಳಿದ್ದು, ಈ ಉಪನ್ಯಾಸ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆರ್‌ಬಿಐ ಗವರ್ನರ್, ಹಿರಿಯ ನಿರ್ವಾಹಕ ಹುದ್ದೆಗಳಿಗೆ ತಂತ್ರಜ್ಞರ ಬದಲು ಸರಕಾರಿ ಅಥವಾ ಸರಕಾರಕ್ಕೆ ಸಂಯೋಜಿತವಾದ ಅಧಿಕಾರಿಗಳನ್ನು ನೇಮಿಸುವುದು ಕೂಡಾ ಸಂಸ್ಥೆಯ ಸ್ವಾಯತ್ತೆಯನ್ನು ದುರ್ಬಲಗೊಳಿಸುವ ಕ್ರಮವಾಗಿದೆ ಎಂದವರು ಹೇಳಿದ್ದರು.

  ಆರ್‌ಬಿಐ ವಶದಲ್ಲಿ ಇರಿಸಿದ್ದ ಮೀಸಲು ಹಣವನ್ನು ಬಿಡುಗಡೆಗೊಳಿಸಬೇಕೆಂದು ಸರಕಾರ ಆರ್‌ಬಿಐ ಮೇಲೆ ನಿರಂತರ ಒತ್ತಡ ಹೇರಿತ್ತು. ಆದರೆ ಚುನಾವಣಾ ವರ್ಷದಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದು ಆಚಾರ್ಯ ಸ್ಪಷ್ಟವಾಗಿ ತಿಳಿಸಿದ್ದರು.

ಆರ್ಥಿಕ ಕಾರ್ಯನೀತಿಯ ಬಗ್ಗೆ ಬಿಗಿ ನಿಲುವು ಹೊಂದಿದ್ದ ಆಚಾರ್ಯರ ನಿರ್ಗಮನದಿಂದಾಗಿ ಆರ್ಥಿಕ ನೀತಿ ಸಮಿತಿಯಲ್ಲಿ ಮೆದು ನಿಲುವಿನ ಅಧಿಕಾರಿಗಳ ಪ್ರಭಾವ ಹೆಚ್ಚಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2019ರ ಜುಲೈ 23ರ ಬಳಿಕ ತನಗೆ ಆರ್‌ಬಿಐ ಡೆಪ್ಯುಟಿ ಗವರ್ನರ್ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗದು ಎಂದು ವಿರಲ್ ಆಚಾರ್ಯ ಕೆಲ ವಾರಗಳ ಹಿಂದೆಯೇ ಸರಕಾರಕ್ಕೆ ಪತ್ರ ಬರೆದಿದ್ದರು ಎಂದು ಆರ್‌ಬಿಐ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್ ಇಕನಾಮಿಕ್ಸ್‌ನಲ್ಲಿ ಆಗಸ್ಟ್‌ನಿಂದ ಪ್ರೊಫೆಸರ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಬಿಸಿನೆಸ್ ಸ್ಟಾಂಡರ್ಡ್ ದಿನಪತ್ರಿಕೆ ವರದಿ ಮಾಡಿದೆ.

ಉರ್ಜಿತ್ ಪಟೇಲ್‌ರಂತೆಯೇ ಆಚಾರ್ಯ ಕೂಡಾ ಅವಧಿಗೆ ಮುನ್ನವೇ ಪದತ್ಯಾಗ ಮಾಡುವ ಸಾಧ್ಯತೆಯಿದೆ ಎಂಬ ವರದಿಯನ್ನು ಕೇಂದ್ರ ಸರಕಾರ ನಿರಾಕರಿಸಿತ್ತು. ಈ ಮಧ್ಯೆ, ಆಚಾರ್ಯ ರಾಜೀನಾಮೆ ಬಗ್ಗೆ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿವೆ. ಸರಕಾರ ಬದಲಾಗಿದೆ, ಆದರೆ ಆರ್ಥಿಕ ಎಳೆದಾಟದ ವಿಷಯ ಬದಲಾಗಿಲ್ಲ. ಬಿಜೆಪಿ ಆಡಳಿತಕ್ಕೆ ಸತ್ಯದ ಕೈಗನ್ನಡಿ ತೋರಿಸಲು ಪ್ರಯತ್ನಿಸಿ ರಾಜೀನಾಮೆ ನೀಡಿದ ತಜ್ಞರ ಸುದೀರ್ಘ ಪಟ್ಟಿಗೆ ವಿರಲ್ ಆಚಾರ್ಯರ ಹೆಸರೂ ಸೇರಿಕೊಂಡಿದೆ. 4 ಆರ್ಥಿಕ ಸಲಹೆಗಾರರು, 2 ಆರ್‌ಬಿಐ ಗವರ್ನರ್‌ಗಳು, ನೀತಿ ಆಯೋಗದ ಒಬ್ಬ ಉಪಾಧ್ಯಕ್ಷರು ಅವಧಿಗೂ ಮುನ್ನವೇ ಹೊರನಡೆದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. ಉರ್ಜಿತ್ ಪಟೇಲ್‌ಗೆ ಆರ್‌ಬಿಐ ಗವರ್ನರ್ ಹುದ್ದೆಗೆ ಭಡ್ತಿ ನೀಡಿದ ಬಳಿಕ 2016ರ ಡಿಸೆಂಬರ್‌ನಲ್ಲಿ ಆರ್‌ಬಿಐಗೆ ನೇಮಕಗೊಂಡ ನಾಲ್ವರು ಡೆಪ್ಯುಟಿ ಗವರ್ನರ್‌ಗಳಲ್ಲಿ ಆಚಾರ್ಯ ಒಬ್ಬರಾಗಿದ್ದಾರೆ.

ಆರ್ಥಿಕ ಸಂಕಷ್ಟದ ಎಚ್ಚರಿಕೆ ನೀಡಿದ್ದ ಆಚಾರ್ಯ

ದೇಶದ ಆರ್ಥಿಕ ಪ್ರಗತಿ ಮತ್ತು ಸ್ಥಿರತೆಯಲ್ಲಿ ಕೇಂದ್ರ ಬ್ಯಾಂಕ್‌ಗಳ ಪ್ರಾಧಾನ್ಯತೆಯ ಬಗ್ಗೆ ಆಚಾರ್ಯರಿಗೆ ಅರಿವಿತ್ತು ಹಾಗೂ ರಿಸರ್ವ್ ಬ್ಯಾಂಕ್‌ಗೆ ಸ್ವಾತಂತ್ರ ಹಾಗೂ ಸ್ವಾಯತ್ತೆ ಅಗತ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಆರ್‌ಬಿಐನ ಅಧಿಕಾರವನ್ನು ದುರ್ಬಲಗೊಳಿಸುವ ಯಾವುದೇ ಸರಕಾರ ಆರ್ಥಿಕ ಮಾರುಕಟ್ಟೆಯ ಕುಸಿತ ಹಾಗೂ ಆರ್ಥಿಕ ಸಂಕಷ್ಟ ಎದುರಿಸಬೇಕಾದೀತು ಎಂದವರು ಎಚ್ಚರಿಸಿದ್ದರು.

ಕಳೆದ ಎರಡೂವರೆ ವರ್ಷಗಳಿಂದ ಆರ್‌ಬಿಐ ಗೊಂದಲದ ಹಾದಿಯಲ್ಲಿ ಸಾಗಿ ಬಂದಿದೆ. ಆರ್‌ಬಿಐಯ ನೀತಿ ನಿರೂಪಣೆಯಲ್ಲಿ ಬದಲಾವಣೆಯಾಗಿದ್ದು ದರ ನಿರ್ಣಯಿಸುವ ಜವಾಬ್ದಾರಿ ಆರು ಸದಸ್ಯರ ಸಮಿತಿಯದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News