ಜಿಂದಾಲ್ ಗೆ ಭೂಮಿ ಹಸ್ತಾಂತರ ವಿರೋಧಿಸಿ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ

Update: 2019-06-24 14:09 GMT

ಬೆಂಗಳೂರು, ಜೂ.24: ಜಿಂದಾಲ್ ಕಂಪನಿಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಭೂಮಿ ಹಸ್ತಾಂತರಿಸಬಾರದು ಹಾಗೂ ಈ ಕಂಪನಿಗೆ ನೀಡಿರುವ ಕ್ರೀಡಾ ಸಂಸ್ಥೆ ಕಂಠೀರವ ಕ್ರೀಡಾಂಗಣದ ಉಸ್ತುವಾರಿ ಜವಾಬ್ದಾರಿ ಪರವಾನಿಗೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ವಿಧಾನಸೌಧ ಮುತ್ತಿಗೆ ಯತ್ನ ನಡೆಸಿದರು.

ಸೋಮುವಾರ ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತ ಮಾರ್ಗದ ಮೂಲಕ, ಜಯ ಕರ್ನಾಟಕ ಸದಸ್ಯರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ವಿಧಾನಸೌಧದ ಕಡೆ ಹೊರಡಲು ಯತ್ನಿಸಿದರು. ಈ ವೇಳೆ, ಪೊಲೀಸರು ತಡೆದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತರ ವರದಿಯಲ್ಲೂ ಜಿಂದಾಲ್ ಕಂಪನಿ ಹೆಸರು ಉಲ್ಲೇಖವಾಗಿದೆ. ಜೊತೆಗೆ, ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ ಕಂಪೆನಿಗೆ ಜಿಂದಾಲ್ ಹಣ ಬಾಕಿ ಉಳಿಸಿಕೊಂಡಿದೆ. ಇಂತಹ ಕಂಪನಿಗೆ 3,666 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಹೇಳಿದರು.

ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಿಂದಾಲ್ ಕಂಪನಿಗೆ ಕೆಲವು ವರ್ಷಗಳ ಅವಧಿಗೆ ಭೂಮಿಯನ್ನು ಕೊಡಲಾಗಿತ್ತು. ಆಗಲೂ ಸಹ ಯಡಿಯೂರಪ್ಪ ಅವರು ಕಿಕ್‌ಬ್ಯಾಕ್ ಪಡೆದು ಜಿಂದಾಲ್ ಗೆ ಭೂಮಿ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ತದನಂತರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು. ಹೀಗಿರುವಾಗ, ಸದ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ, ಸಮ್ಮಿಶ್ರ ಸರಕಾರದ ತೀರ್ಮಾನ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದರು.

3,666 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಜಿಂದಾಲ್ ವಂಚಕ ಕಂಪನಿ ಎಂದು ಗೊತ್ತಿದ್ದರೂ ಭೂಮಿ ಪರಭಾರೆ ಮಾಡಲು ಮುಂದಾಗಿರುವದನ್ನು ನೋಡಿದರೆ, ಸಮ್ಮಿಶ್ರ ಸರಕಾರವೂ ಕಿಕ್‌ಬ್ಯಾಕ್ ಪಡೆದಿರುವ ಬಗ್ಗೆ ನಮಗೆ ಅನುಮಾನವಿದೆ ಎಂದು ಆರೋಪಿಸಿದರು.

ಜಿಂದಾಲ್ ಕಂಪೆನಿಗೆ ನೀಡಿರುವ ಕ್ರೀಡಾ ಸಂಸ್ಥೆ ಕಂಠೀರವ ಕ್ರೀಡಾಂಗಣದ ಉಸ್ತುವಾರಿ ಜವಾಬ್ದಾರಿಯ ಪರವಾನಿಗೆಯ ಅವಧಿ ಈಗಾಗಲೇ ಮುಗಿದಿದ್ದು, ಮತ್ತೆ ಪರವಾನಿಗೆಯನ್ನು ನೀಡುವಂತೆ ಸರಕಾರಕ್ಕೆ ಜಿಂದಾಲ್ ಸಂಸ್ಥೆ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಕ್ರೀಡಾಂಗಣದ ಹೊಣೆಯ ಪರವಾನಿಗೆಯನ್ನು ಅವರಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಅರೆಬೆತ್ತಲೆ; ರಸ್ತೆ ಮೇಲೆ ಉರುಳಾಟ
ಮೈಸೂರು ಬ್ಯಾಂಕ್ ವೃತ್ತದಲ್ಲಿಯೇ ಕುಳಿತ ಜಯ ಕರ್ನಾಟಕ ಸಂಘಟನೆಯ ಸದಸ್ಯರು, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ವಾಗ್ವಾದ ನಡೆಯಿತು. ಸಂಚಾರ ದಟ್ಟಣೆಯೂ ಅಧಿಕವಾಗಿತ್ತು. ಕೆಲ ಸದಸ್ಯರು ರಸ್ತೆಯಲ್ಲಿ ಉರುಳುತ್ತಾ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News