ಬಿಎಸ್‌ವೈ ವೈಯಕ್ತಿಕ ಟೀಕೆ ಕೀಳು ಅಭಿರುಚಿಗೆ ಸಾಕ್ಷಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-06-24 14:41 GMT

ಬೆಂಗಳೂರು, ಜೂ. 24: ರಾಜ್ಯದ ಮೈತ್ರಿ ಸರಕಾರದ ವಿರುದ್ಧ ವಿಪಕ್ಷ ನಾಯಕ ಯಡಿಯೂರಪ್ಪ ಮಾಡಿರುವ ಆರೋಪಗಳು ಆರೋಗ್ಯಕರವಾಗಿಲ್ಲ. ಸರಕಾರೇತರ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿರುವ ಪ್ರಸ್ತಾಪಗಳು ಕೀಳು ಅಭಿರುಚಿಯಿಂದ ಕೂಡಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಬರ ಪರಿಸ್ಥಿತಿ: ರಾಜ್ಯದಲ್ಲಿನ ಬರ ಪರಿಸ್ಥಿತಿ ಎದುರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಖುದ್ದು ಮುಖ್ಯ ಕಾರ್ಯದರ್ಶಿಯವರೆ ಪ್ರತಿ 15 ದಿನಗಳಿಗೆ ಒಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ

ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯ ಗುರಿ ಮೀರಿದ ಸಾಧನೆ ಮಾಡಿ, ಉದ್ಯೋಗ ಒದಗಿಸಲಾಗಿದೆ. ಕೇಂದ್ರದಿಂದ ಕೂಲಿ ಹಣ ಬಿಡುಗಡೆಯಾಗದಿದ್ದರೂ, ಸರಕಾರವೆ ಮುಂಗಡ ಅನುದಾನ ನೀಡಿ, ಕೂಲಿ ಮೊತ್ತ ಜನರಿಗೆ ಪಾವತಿಸಿದೆ. ಆದರೆ, ಬಿಎಸ್‌ವೈ ವಾಸ್ತವತೆಯ ಅರಿವಿಲ್ಲದೆ, ಆಧಾರರಹಿತ ಆರೋಪ ಮಾಡುವ ಬದಲು ಕೇಂದ್ರದಿಂದ ಅನುದಾನ ಕೊಡಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಸಾಲಮನ್ನಾ ಪ್ರಕ್ರಿಯೆ ಪೂರ್ಣ: ಜುಲೈ ಅಂತ್ಯದೊಳಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರವೂ ಯಾರಾದರೂ ಅರ್ಹ ರೈತರು ಮನವಿ ಸಲ್ಲಿಸಿದಲ್ಲಿ ಸಾಲಮನ್ನಾಕ್ಕೆ ಸರಕಾರ ಸಿದ್ಧವಿದೆ. ಸಾಲಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ಯಾಂಕರುಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಂದಾಲ್ ಸಂಸ್ಥೆಗೆ ಭೂಮಿ: ಜಿಂದಾಲ್ ಸಂಸ್ಥೆಯಿಂದ ಕಿಕ್‌ಬ್ಯಾಕ್ ಪಡೆದವರು ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಸಂಸ್ಥೆಗೆ ಭೂಮಿ ನೀಡುವ ಕುರಿತು ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು, ಬಿಎಸ್‌ವೈಗೆ ತಿರುಗೇಟು ನೀಡಿದ್ದಾರೆ.

‘ರೈತರ ಸಾಲಮನ್ನಾ ಕುರಿತು ವಿಪಕ್ಷ ನಾಯಕರು ಬಾಯಿ ಚಪಲಕ್ಕೆ ಉದ್ಘರಿಸುವ ಮಾತುಗಳಿಂದ ಅವರು ರೈತರನ್ನು ದಿಕ್ಕು ತಪ್ಪಿಸಲು ಇಲ್ಲವೆ ಗೊಂದಲ ಸೃಷ್ಟಿಸಲೂ ಸಾಧ್ಯವಿಲ್ಲ. ಸಾಲಮನ್ನಾ ಸೌಲಭ್ಯ ಎಲ್ಲ ಅರ್ಹ ರೈತರಿಗೂ ಒದಗಿಸುವುದನ್ನು ನಮ್ಮ ಸರಕಾರ ಖಾತರಿ ಪಡಿಸಿದೆ’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News