3 ವರ್ಷಗಳ ನನ್ನ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ: ಜಿ.ಎ.ಬಾವಾ

Update: 2019-06-24 14:51 GMT

ಬೆಂಗಳೂರು, ಜೂ.24: ವಕ್ಫ್ ಆಸ್ತಿ ವ್ಯಾಪ್ತಿಗೊಳಪಡುವ ನಗರದ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆವರಣದಲ್ಲಿ ಮೂರು ವರ್ಷದ ನನ್ನ ಆಡಳಿತ ಅವಧಿಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವು ಅಭಿವೃದ್ಧಿ ಕಾರ್ಯ ನಡೆದಿದ್ದು, ಇದರ ಉಪಯೋಗವನ್ನು ಸಮುದಾಯ ಪಡೆಯಬೇಕೆಂದು ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಹೇಳಿದರು.

ಸೋಮವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮಿದ್ ಷಾ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1976ರಲ್ಲಿ ಹಮೀದ್ ಷಾ ಕಾಂಪ್ಲೆಕ್ಸ್ ನಿರ್ಮಾಣವಾಯಿತು. 2016ರಲ್ಲಿ ಈ ಕಾಂಪ್ಲೆಕ್ಸ್‌ನ ಆಡಳಿತ ಸಮಿತಿಯು ಅಧಿಕಾರ ವಹಿಸಿಕೊಂಡ ಬಳಿಕ, ನಿಯಮಿತ ಬಾಡಿಗೆ ಸಂಗ್ರಹವನ್ನು ಹೆಚ್ಚು ಮಾಡಲಾಗಿದ್ದು, ಈ ಸಮಿತಿಯ ಖಾತೆಯಲ್ಲಿ ಮೂರೂವರೆ ಕೋಟಿ ರೂ.ಜಮೆಯಾಗಿದೆ ಎಂದರು.

ಕಾಂಪ್ಲೆಕ್ಸ್ ಆವರಣದಲ್ಲಿ 10 ಯಂತ್ರಗಳನ್ನು ಒಳಗೊಂಡ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಇನ್ನು 10 ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ ನಿರ್ಮಾಣ, ಅದರ ಎದುರುಗಡೆ ಐದು ಅಂತಸ್ತಿನ ಐಟಿಐ ಬ್ಲಾಕ್ ನಿರ್ಮಾಣವಾಗಿದೆ. ಅಲ್ಲದೆ, ಮಸೀದಿಯ ಇಮಾಮ್ ಹಾಗೂ ಮುಅಝ್ಝಿನ್‌ಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ಪುಟ್ಟ ಉದ್ಯಾನವನ, ಹಝ್ರತ್ ಮೊಹಿಬ್ ಷಾ ದರ್ಗಾ ಮುಖ್ಯ ದ್ವಾರದಲ್ಲಿ ಮಿನಾರ ನಿರ್ಮಿಸಲಾಗಿದೆ. ಉಚಿತ ಔಷಧಾಲಯ, ಆವರಣದೊಳಗೆ ಸಿಮೆಂಟ್ ರಸ್ತೆ, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ಎರಡು ಕೊಳವೆ ಬಾವಿ ತೋಡಿಸಲಾಗಿದೆ ಎಂದು ಅವರು ವಿವರಿಸಿದರು.

ಈಗಿರುವ ವಾಹನ ನಿಲುಗಡೆ ಪ್ರದೇಶದಲ್ಲೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವನ್ನು ಸಮಿತಿ ಹೊಂದಿದೆ. ಮುಂದಿನ ದಿನಗಳಲ್ಲಿ, ಕೌಶಲ್ಯಾಭಿವೃದ್ಧಿ ತರಬೇತಿ ಘಟಕ, ವಾಹನ ಚಾಲನೆ ಪರವಾನಿಗೆ ಕೇಂದ್ರ ಹಾಗೂ ನ್ಯಾಯಾಮ ಘಟಕ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದ ಅವರು, ಹಮೀದ್ ಷಾ ಕಾಂಪ್ಲೆಕ್ಸ್ ಆಡಳಿತ ಸಮಿತಿಯು ಕೈಗೊಳ್ಳುವಂತಹ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಇಲಾಖೆ ಸಚಿವರು, ಸರಕಾರವು ಸಂಪೂರ್ಣ ಸಹಕಾರ ನೀಡಿದೆ ಎಂದು ಜಿ.ಎ.ಬಾವಾ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News