ವಿಧಾನಸೌಧದೊಳಗೆ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Update: 2019-06-24 15:09 GMT

ಬೆಂಗಳೂರು, ಜೂ.24: ವಿಧಾನಸೌಧದ ಮೂರನೇ ಮಹಡಿಯಲ್ಲಿ ವ್ಯಕ್ತಿಯೊಬ್ಬ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ನಿವಾಸಿ ಆರ್.ರೇವಣ್ಣ ಕುಮಾರ್(45) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಅನೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸಹಾಯಕ ಗ್ರಂಥಪಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಸೋಮವಾರ ಮಧ್ಯಾಹ್ನ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಆಗಮಿಸಿದ ರೇವಣ್ಣ ಕುಮಾರ್, ಮೂರನೇ ಮಹಡಿ ಶೌಚಾಲಯ ಕೊಠಡಿ ಸಂಖ್ಯೆ 332ರಲ್ಲಿ ಮಾರಕಾಸ್ತ್ರದಿಂದ ಕುತ್ತಿಗೆ ಹಾಗೂ ಬಲಗೈ ಕುಯ್ದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇದನ್ನು ಗಮನಿಸಿದ ಸಿಬ್ಬಂದಿ, ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿ, ಆತನನ್ನು ಶಿವಾಜಿನಗರ ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿದೆ.

ಪ್ರಾಣಾಪಾಯವಿಲ್ಲ: ಗಾಯಗೊಂಡಿರುವ ರೇವಣ್ಣನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯವಿಲ್ಲ. ಆತ ಆತ್ಮಹತ್ಯೆ ಯತ್ನ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಹರಿತವಾದ ಆಯುಧ ದೊರೆತಿಲ್ಲ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಐಪಿಸಿ 309(ಆತ್ಮಹತ್ಯೆ ಯತ್ನ) ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಕೈಗೊಳ್ಳುವುದಾಗಿ ಕೇಂದ್ರ ವಿಭಾಗದ ಡಿಸಿಪಿ ದೇವರಾಜು ಹೇಳಿದರು.

ಖಾಯಂ ಹುದ್ದೆಗೆ ಆತ್ಮಹತ್ಯೆ?

ರಾಜ್ಯ ವ್ಯಾಪ್ತಿಯಲ್ಲಿನ ಸುಮಾರು 6 ಸಾವಿರ ಗ್ರಂಥಪಾಲಕರನ್ನು ಖಾಯಂಗೊಳಿಸಬೇಕೆಂಬ ಆಗ್ರಹಕ್ಕಾಗಿ ಆರ್.ರೇವಣ್ಣ ಕುಮಾರ್ ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಯತ್ನಕ್ಕೂ ಮುನ್ನ ರೇವಣ್ಣ ಕುಮಾರ್ ಡೆತ್ ನೋಟ್ ಬರೆದಿದ್ದು, ದಯಮಾಡಿ ಹಂಗಾಮಿ ನೌಕರರನ್ನು ಖಾಯಂಪಡಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಸರಕಾರದ ಗಮನ ಸೆಳೆಯಲು ರೇವಣ್ಣ ಈ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News