ಡಿಕೆಶಿ ಅರ್ಜಿ ವಜಾಗೊಳಿಸಿದ ಜನಪ್ರತಿನಿಧಿಗಳ ಕೋರ್ಟ್

Update: 2019-06-25 15:51 GMT

ಬೆಂಗಳೂರು, ಜೂ.25: ಲೆಕ್ಕವಿಲ್ಲದ 8.60 ಕೋಟಿ ರೂ.ಪತ್ತೆ ಪ್ರಕರಣದ ಆರೋಪದಿಂದ ನನ್ನನ್ನು ಕೈಬಿಡಬೇಕೆಂದು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ಕೋರ್ಟ್ ವಜಾಗೊಳಿಸಿದೆ. 

ಈ ಕುರಿತು ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರಿದ್ದ ನ್ಯಾಯಪೀಠ, ಮಂಗಳವಾರ ಪ್ರಕಟಿಸಿದೆ. ಇದರಿಂದಾಗಿ ಶಿವಕುಮಾರ್ ಸೇರಿ ಪ್ರಕರಣದ ಉಳಿದ ಆರೋಪಿಗಳ ವಿರುದ್ಧ ಇದೇ ನ್ಯಾಯಾಲಯ ದೋಷರೋಪ ಪ್ರಕ್ರಿಯೆ ಆರಂಭಿಸಿದೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಈ ಹಿಂದಿನ ನ್ಯಾಯಾಧೀಶ ಬಿ.ವಿ.ಪಾಟೀಲ್ ಪ್ರಕರಣದಿಂದ ಮುಕ್ತಿ ನೀಡಿ ಆದೇಶಿಸಿದ್ದರು. ಆದಾಯ ತೆರಿಗೆ ಇಲಾಖೆಯು ಐಪಿಸಿ ಕಲಂ 120-ಬಿ(ಅಪರಾಧಿಕ ಒಳಸಂಚು) ಅನುಸಾರ ದಾಖಲಿಸಿರುವ ದೂರು ಸರಿಯಾಗಿಯೇ ಇದೆ. ಇದರಲ್ಲಿ ಯಾವುದೇ ಲೋಪವಿಲ್ಲ ಎಂಬ ಆದಾಯ ತೆರಿಗೆ ಇಲಾಖೆ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.

2017ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ಹೊಸದಿಲ್ಲಿ, ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಡಿಕೆಶಿ ತೆರಿಗೆ ವಂಚನೆ ಮಾಡಿರುವುದಾಗಿ ಐಟಿ ಇಲಾಖೆ ದೂರು ದಾಖಲಿಸಿತ್ತು. ಡಿಕೆಶಿ ಅವರು ಆದಾಯ ತೆರಿಗೆ ಕಾಯ್ದೆ-1961ರ ಕಲಂ 276 ಸಿ(1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ತನಿಖೆಯ ವೇಳೆ ಇನ್ನಷ್ಟು ಅಪರಾಧಗಳು ಬೆಳಕಿಗೆ ಬರಬಹುದು ಎಂಬುದು ಐಟಿ ವಾದವಾಗಿದೆ. ಐಟಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದ್ದರು.

ಬೆಳಗ್ಗೆ 11.30ಕ್ಕೆ ಸಚಿವ ಡಿಕೆಶಿ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾಗಿದ್ದರು. ಸಂಜೆ 5.30ಕ್ಕೆ ನ್ಯಾಯಾಧೀಶರು ತೀರ್ಪನ್ನು ಪ್ರಕಟಿಸಿದ್ದರು. ತೀರ್ಪು ಪ್ರಕಟವಾದ ಬಳಿಕ ಡಿಕೆಶಿ ತಮ್ಮ ಪರ ವಕೀಲರ ಜೊತೆ ಮಾತುಕತೆಯಲ್ಲಿ ತೊಡಗಿರುವುದು ಕಂಡು ಬಂದಿತು. ವಾಲ್ಮೀಕಿ ಸಮುದಾಯದ ಪ್ರತಿಭಟನೆಯ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ಡಿಕೆಶಿ ಕಾರನ್ನು ಬಿಟ್ಟು ಮೆಟ್ರೋದಲ್ಲಿ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News