ವೈಜ್ಞಾನಿಕವಾಗಿ ಕಸ ಸಾಗಿಸುವಲ್ಲಿ ಬಿಬಿಎಂಪಿ ವಿಫಲ: ಗಬ್ಬು ನಾರುತ್ತಿರುವ ರಸ್ತೆಗಳು

Update: 2019-06-25 16:14 GMT

ಬೆಂಗಳೂರು, ಜೂ.25: ರಾಜ್ಯದ ರಾಜಧಾನಿಯಲ್ಲಿನ ಕಸದ ಸಮಸ್ಯೆ ಗ್ರಾಮಾಂತರ ಜಿಲ್ಲೆಗೂ ಹರಡಿದ್ದು, ವೈಜ್ಞಾನಿಕವಾಗಿ ಕಸ ಸಾಗಿಸುವಲ್ಲಿ ವಿಫಲವಾದ ಪರಿಣಾಮ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಗಳಲ್ಲಿ ಬಳಿ ದುರ್ನಾತ ಬೀರುತ್ತಿದೆ.

ನಗರದ ಕಸ ವಿಲೇವಾರಿಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಪ್ರದೇಶ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಬಿಬಿಎಂಪಿ ಕಸವನ್ನು ವೈಜ್ಞಾನಿಕವಾಗಿ ಸಾಗಿಸುವಲ್ಲಿ ವಿಫಲವಾಗಿರುವ ಪರಿಣಾಮ ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳ ಜನ ಕಸದ ದುರ್ನಾತಕ್ಕೆ ತುತ್ತಾಗಿದ್ದಾರೆ.

ಬೆಂಗಳೂರು ನಗರದಿಂದ ಟನ್‌ಗಟ್ಟಲೆ ಕಸದ ರಾಶಿಯು ಲಾರಿಗಳ ಮೂಲಕ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಮಾರ್ಗವಾಗಿ ಸಾಗಿ ದೊಡ್ಡಬೆಳವಂಗಲ ಹೋಬಳಿಯ ಮೂಗಿನಹಳ್ಳಿ ಕ್ರಾಸ್ ಭಾಗಕ್ಕೆ ಸಾಗಬೇಕಿದೆ. ಹೀಗೆ ಸಾಗುವ ವೇಳೆ ಲಾರಿಗಳಿಂದ ಕಸ ಹಾಗೂ ಕಸದ ನೀರು ಸುರಿಯುತ್ತಿದ್ದು, ಇಲ್ಲಿನ ಗ್ರಾಮಗಳಲ್ಲಿ ಗಬ್ಬು ನಾರುತ್ತಿದೆ ಎಂದು ಸ್ಥಳೀಯ ಆರೋಪಿಸಿದ್ದಾರೆ.

ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದಾಬಸ್‌ಪೇಟೆಗೆ ಸಂಪರ್ಕ ಕಲ್ಪಿಸುವ ಮುದ್ದಲಿಂಗನಹಳ್ಳಿ ಗ್ರಾಮದಲ್ಲಿನ ರೈಲ್ವೆ ಕ್ರಾಸಿಂಗ್‌ನಿಂದಾಗಿ ಈ ಭಾಗದಲ್ಲಿ ಸಂಚಾರ ಮಾಡುವ ಕಸ ಸಾಗಾಣಿಕೆ ವಾಹನಗಳಲ್ಲಿ ಸಾಕಷ್ಟು ಸಮಯ ನಿಲ್ಲಬೇಕಾಗುತ್ತದೆ. ಈ ಸಂದರ್ಭದಲ್ಲಿ ಲಾರಿಗಳಿಂದ ಕಸದ ನೀರು ಹೊರಬರುತ್ತಿದ್ದು, ಅತ್ಯಂತ ಕೆಟ್ಟವಾಸನೆ ಹೊರಸೂಸುತ್ತಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಅಲ್ಲದೆ, ಕ್ರಾಸಿಂಗ್‌ನಲ್ಲಿ ರೈಲು ಸಂಚರಿಸುವವರೆಗೂ ಲಾರಿಗಳು ನಿಲ್ಲಬೇಕಾಗಿದ್ದರಿಂದ ಅದರಿಂದ ಹೊರಬರುವ ಕಸದ ಕೆಟ್ಟ ವಾಸನೆಯಿಂದ ಪರದಾಡುವಂತಾಗಿದೆ. ಲಾರಿಯಿಂದ ನೀರು ಸೋರುವುದರಿಂದ ವಾಹನ ಸವಾರರು ಲಾರಿಯಿಂದ ಬಹುದೂರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆಯುಂಟಾಗುತ್ತಿದೆ.

ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮಾರ್ಗದ ರೈಲು ಸಂಚರಿಸುವುದರಿಂದ ಪ್ರತಿನಿತ್ಯ ಸುಮಾರು 20 ಬಾರಿಯಾದರೂ ರೈಲ್ವೆ ಗೇಟ್ ಹಾಕಲಾಗುತ್ತದೆ. ಈ ವೇಳೆ ಬಂದು ನಿಲ್ಲುವ ಲಾರಿಗಳಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೆ, ಕೆಲವು ಸಂದರ್ಭದಲ್ಲಿ ಬಿಬಿಎಂಪಿ ಕಸದ ಲಾರಿಗಳು ಹಲವು ಬಾರಿ ಕಸವನ್ನು ರಸ್ತೆ ಬದಿ ಸುರಿದು ಪರಾರಿಯಾಗಿರುವ ನಿದರ್ಶನ ಇವೆ. ಕೆಲ ತಿಂಗಳ ಹಿಂದೆ ರಸ್ತೆ ಬದಿ ಕಸ ಸುರಿದ ಪರಿಣಾಮ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಲಾರಿ ಚಾಲಕರು ರಸ್ತೆ ಇಕ್ಕೆಲಗಳಲ್ಲಿ ಕಸ ಸುರಿದು ಪರಾರಿಯಾಗುವುದು ಈಗಲೂ ಮುಂದುವರಿದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News