ಗುಂಡಿಕ್ಕಿ ರೌಡಿ ಅಶೋಕ್‌ ಬಂಧನ

Update: 2019-06-25 16:15 GMT

ಬೆಂಗಳೂರು, ಜೂ.25: ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ರೌಡಿ ಅಶೋಕ್‌ನನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ, ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ನಿವಾಸಿಯಾಗಿರುವ ಅಶೋಕ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತ ಕೆಜಿಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ.

ಇತ್ತೀಚಿಗೆ ಲಿಂಗರಾಜಪುರದಲ್ಲಿ ವಾಸವಿರುವ ಅಸ್ಸಾಂ ಮೂಲದ ಯುವಕರ ಮನೆಗೆ ಏಕಾಏಕಿ ನುಗ್ಗಿ ಬೆದರಿಸಿ, ಹಣ ವಸೂಲಿ ಮಾಡಿದ್ದರು. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ 11:30 ಸುಮಾರಿಗೆ ಆರೋಪಿ ಅಶೋಕ್ ಪುಲಿಕೇಶಿನಗರದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾನೆ ಎಂದು ಖಚಿತ ಮಾಹಿತಿ ಆಧರಿಸಿ ಬಾಣಸವಾಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿರೂಪಾಕ್ಷ ಸ್ವಾಮಿ ನೇತೃತ್ವದ ತಂಡ ಬಂಧಿಸಲು ತೆರಳಿದ್ದಾರೆ ಎನ್ನಲಾಗಿದೆ.

ಕಸ್ತೂರಿನಗರ 3ನೇ ಕ್ರಾಸ್‌ನಲ್ಲಿ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಆರೋಪಿ ಅಶೋಕ್, ಪೊಲೀಸರನ್ನು ಕಂಡು ಜಾರಿಬಿದ್ದಿದ್ದಾನೆ. ತಕ್ಷಣ ಪೇದೆ ಸೌದಾಗರ್ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಇನ್ಸ್‌ಪೆಕ್ಟರ್ ವಿರೂಪಾಕ್ಷ ಸ್ವಾಮಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ, ಆರೋಪಿ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.

ತಕ್ಷಣ ಸುತ್ತುವರಿದ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಪೇದೆ ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News