ನನ್ನ ಸಾವಿಗೆ ಗೆಹ್ಲೋಟ್, ಪೈಲಟ್ ಕಾರಣ: ಪತ್ರ ಬರೆದಿಟ್ಟು ರೈತ ಆತ್ಮಹತ್ಯೆ

Update: 2019-06-26 15:35 GMT

  ಜೈಪುರ,ಜೂ.26: ಹೆಚ್ಚುತ್ತಿರುವ ಸಾಲದ ಹೊರೆ ಹಾಗೂ ಸಾಲ ಮರುಪಾವತಿಸದೆ ಇದ್ದಲ್ಲಿ ತನ್ನ ಭೂಮಿಯನ್ನು ಹರಾಜು ಹಾಕಲಾಗುವುದೆಂಬ ಬ್ಯಾಂಕ್ ಅಧಿಕಾರಿಗಳ ಬೆದರಿಕೆ ಯಿಂದ ಖಿನ್ನನಾದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ರವಿವಾರ ನಡೆದಿದೆ.

ರೈಸಿಂಗ್‌ನಗರ್ ಬ್ಲಾಕ್‌ನ ಥಾಕ್ರಿ ಗ್ರಾಮದ ನಿವಾಸಿ ಸೊಹನ್‌ಲಾಲ್ ಕಡೇಲಾ (41) ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ರೈತ. ಆತ್ಮಹತ್ಯೆಗೆ ಮುನ್ನ ವಿಡಿಯೋದಲ್ಲಿ ತನ್ನ ಹೇಳಿಕೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ ಹಾಗೂ ಆತ್ಮಹತ್ಯೆ ಪತ್ರವೊಂದನ್ನು ಬರೆದಿಟ್ಟಿದ್ದಾರೆ.

ತನ್ನ ಸಾವಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹಾಗೂ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೊಣೆಗಾರರೆಂದು ದೂರಿದ್ದಾರೆ. ಲೋಕಸಭಾ ಚುನಾವಣೆ ನಡೆದ ಹತ್ತು ದಿನಗಳೊಳಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಲು ರಾಜಸ್ಥಾನ ಸರಕಾರದ ವಿಫಲವಾದುದರಿಂದ ತಾನು ಸಾವಿಗೆ ಶರಣಾಗ ಬೇಕಾಯಿತು ಎಂದು ರಯತ ಆತ್ಮಹತ್ಯಾ ಪತ್ರದಲ್ಲಿ ಹೇಳಿದ್ದಾರೆ.

 ರೈತರೆಲ್ಲರೂ ಈಗ ಒಗ್ಗಟ್ಟಾಗಬೇಕಾಗಿದೆ ಹಾಗೂ ಅಶೋಕ್ ಗೆಹ್ಲೊಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗಿದೆ. ‘‘ನನ್ನ ಕುಟುಂಬದ ಪಾಲನೆಯ ಹೊಣೆಯು ನಿಮ್ಮ ಜವಾಬ್ದಾರಿಯಾಗಿದೆ. ಅವರ ಬಗ್ಗೆ ಕಾಳಜಿ ವಹಿಸಿ’’ ಎಂದು ಕಡೇಲಾ ರೈತರನ್ನು ವಿನಂತಿಸಿದ್ದಾರೆ.

  ಕಡೇಲಾ ರಾಯ್‌ಸಿಂಗ್‌ನಗರ ಶ್ರೀಗಂಗಾನಗರ ಜಿಲ್ಲೆಯಲ್ಲಿ ಸುಮಾರು ಎಂಟು ಎಕರೆ ಜಮೀನು ಹೊಂದಿದ್ದು, ಅದಕ್ಕಾಗಿ ಆತ ರಾಷ್ಟ್ರೀಕೃತ ಬ್ಯಾಂಕೊಂದರ ಪ್ರಾದೇಶಿಕ ಶಾಖೆಯಿಂದ ಎರಡು ಲಕ್ಷ ರೂ. ಸಾಲ ಪಡೆದಿದ್ದರು. ಕೆಲವೇ ವರ್ಷಗಳಲ್ಲಿ ಸಾಲದ ಹೊರೆ ಹೆಚ್ಚಾಗಿ, ಮರುಪಾವತಿಸಲು ಅಸಾಧ್ಯವಾಗಿ ಹೋಯಿತೆಂದು ಅವರ ಕುಟುಂಬಿಕರು ಹೇಳಿದ್ದಾರೆ. ಭಾರತ್‌ಮಾಲಾ ಯೋಜನೆಯಡಿ ಕಡೇಲಾಗೆ ಸೇರಿದ ಜಮೀನನ್ನು ಸರಕಾರವು ವಶಪಡಿಸಿಕೊಂಡಿತ್ತು. ಆದರೆ ಅದಕ್ಕಾಗಿ ಈವರೆಗೆ ಯಾವುದೇ ಪರಿಹಾರವನ್ನು ಪಾವತಿಸಿರಲಿಲ್ಲ. ಉಳಿದ ಜಮೀನಿನಲ್ಲಿ ಬರುವ ವರಮಾನದಿಂದ ಸಾಲವನ್ನು ಮರುಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.

 ‘‘ರಾಜ್ಯ ಸರಕಾರದ ಸಾಲಮನ್ನಾಕ್ಕಾಗಿ ಕಾಯದೆ, ಸಾಲವನ್ನು ಮರುಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಕಡೇಲಾ ಮೇಲೆ ಒತ್ತಡ ಹೇರುತ್ತಿದ್ದರು. ಈ ಒತ್ತಡವನ್ನು ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಕಡೇಲಾ ಅವರು ಪುತ್ರಿ ಮೀನಾಕ್ಷಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News