ಹೊಸ ಸಮಸ್ಯೆ ಸೃಷ್ಟಿ ಮಾಡಿದ ಶೇ. 10 ಮೀಸಲಾತಿ

Update: 2019-06-26 18:12 GMT

ದಿಲ್ಲಿ ವಿಶ್ವ ವಿದ್ಯಾನಿಲಯದ ಪ್ರವೇಶಾತಿ ಸಹಾಯ ಮೇಜಿನ ಬಳಿ ಹೋಗಿ ವಿಚಾರಣೆಗಳನ್ನು ಮಾಡುತ್ತಿದ್ದಂತೆಯೆ ಗುಂಜನ್ ಮಖಿಜನಿ ಗಲಿಬಿಲಿಗೊಂಡಂತೆ ಕಂಡಳು. ಹದಿನೆಂಟರ ಹರೆಯದ ಆಕೆ ಪತ್ರಿಕೋದ್ಯಮ ಕೋರ್ಸ್‌ಗೆ ಸೇರಲು ಬಯಸಿದ್ದಳು; ಈ ಬಾರಿ ಒಂದು ಹೊಸ ಮೀಸಲಾತಿ ಕೋಟಾ ಬಂದಿದೆ ಎಂದು ಅವಳು ಕೇಳಿಸಿಕೊಂಡಿದ್ದಳು. ಕಳೆದ ಜನವರಿ ತಿಂಗಳಲ್ಲಿ, ನರೇಂದ್ರ ಮೋದಿ ಸರಕಾರ ಸಂವಿಧಾನ ತಿದ್ದುಪಡಿಯೊಂದನ್ನು ಅಂಗೀಕರಿಸಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರಕಾರಿ ನೌಕರಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲುಎಸ್) ಶೇ. 10 ಮೀಸಲಾತಿಯನ್ನು ಜಾರಿಗೊಳಿಸಿತ್ತು. ವಾರ್ಷಿಕ 8 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಕುಟುಂಬಗಳ ಸದಸ್ಯರಿಗೆ 5 ಎಕರೆ ಜಮೀನಿಗಿಂತ ಹೆಚ್ಚು ಜಮೀನು ಇಲ್ಲದವರಿಗೆ ರೆಸಿಡೆನ್ಸಿಯಲ್ ಪ್ಲಾಟ್‌ಗಳಿಲ್ಲದವರಿಗೆ ಈ ಮೀಸಲಾತಿ ದೊರಕುತ್ತದೆ ಎಂದು ಹೇಳಲಾಗಿತ್ತು.

ತಾನು ಈ ಮೀಸಲಾತಿಗೆ ಅರ್ಹಳೆಂದು ಮಖಿಜನಿ ಹೇಳಿದಳು. ಆದರೆ ಆಕೆ ತನ್ನ ಅರ್ಹತೆಯನ್ನು ಸಾಬೀತು ಪಡಿಸಲು ಅವಳ ಏರಿಯಾದ ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟರಿಂದ ಆದಾಯ ಪ್ರಮಾಣ ಪತ್ರ ಹಾಗೂ ಆಸ್ತಿ (ಅಸೆಟ್) ಪ್ರಮಾಣ ಪತ್ರ ತರಬೇಕಾಗಿತ್ತು. ಆದರೆ ಇವುಗಳನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ.
ಸಂಬಂಧಿಸಿದ ಜಿಲ್ಲಾ ಕಚೇರಿಯ ಅಧಿಕಾರಿಗಳಿಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ. ‘‘ಯಾವಾಗ ನನಗೆ ಈ ಪ್ರಮಾಣ ಪತ್ರಗಳು ಸಿಗಬಹುದೆಂದು ಕೂಡ ಅವರು ಹೇಳಲಿಲ್ಲ’’ ಎನ್ನುತ್ತಾಳೆ ಮಖಿಜನಿ.
2018ರಲ್ಲಿ ಛತ್ತೀಸ್‌ಗಡ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಅಸೆಂಬ್ಲಿ ಚುನಾವಣೆಗಳಲ್ಲಿ ಸೋತ ಬಳಿಕ ಬಿಜೆಪಿ ಮೇಲ್ಜಾತಿಗಳ ತನ್ನ ಮತ ಬ್ಯಾಂಕನ್ನು ಏಕತ್ರೀಕರಿಸಲು ಅದು ಹೆಣೆದ ತಂತ್ರ ಇಡಬ್ಲುಎಸ್ ಮೀಸಲಾತಿ ಎಂದು ವ್ಯಾಪಕವಾಗಿ ಹೇಳಲಾಗಿತ್ತು. ಒಂದು ಹೊಸ ಅಧ್ಯಯನದ ಪ್ರಕಾರ ಈ ಕೋಟಾದ ಅವಶ್ಯಕತೆಯೇ ಇರಲಿಲ್ಲ. ಈ ವರ್ಗದ ವಿದ್ಯಾರ್ಥಿಗಳಿಗೆ ಈಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಾತಿನಿಧ್ಯ ದೊರಕಿದೆ. ಅಲ್ಲದೆ ಈ ಕೋಟಾದಿಂದ ಈಗಾಗಲೇ ಮೀಸಲಾತಿ ಸೌಲಭ್ಯಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಾರ್ವಜನಿಕ ವಿವಿಗಳು ತಮ್ಮ ಒಟ್ಟು ಸೀಟುಗಳನ್ನು ಸುಮಾರು ಶೇ. 25ರಷ್ಟು ಹೆಚ್ಚಿಸಬೇಕಾಗುತ್ತದೆ.

ಆರು ತಿಂಗಳುಗಳ ಬಳಿಕ ಈ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಮೂಲಚೌಕಟ್ಟು, ಕಟ್ಟಡಗಳು ಹಾಗೂ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸದೆ ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾತಿ ಹೆಚ್ಚಳ ಹೇಗೆ ಸಾಧ್ಯ? ಇದಲ್ಲದೆ ಮೀಸಲಾತಿಗೆ ಅರ್ಹರಾದ ವಿದ್ಯಾರ್ಥಿಗಳು ಕೂಡ ಸಂಬಂಧಿತ ಕಂದಾಯ ಇಲಾಖೆಯಿಂದ ಆದಾಯ ಪ್ರಮಾಣ ಪತ್ರ ಪಡೆಯುವುದು ಬೆಟ್ಟದಷ್ಟು ದೊಡ್ಡ ಸಮಸ್ಯೆಯಾಗಿದೆ. ಜೂನ್ 4ರಂದು ದಿಲ್ಲಿ ಸರಕಾರವು ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರಗಳ ನೀಡಿಕೆಗೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತಾದರೂ ಜಿಲ್ಲೆಯ ಅಧಿಕಾರಿಗಳು ಆ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದರೆಂದು ಹಲವು ವಿದ್ಯಾರ್ಥಿಗಳು ಹೇಳಿದ್ದಾರೆ. ‘‘ಅಧಿಕಾರಿಗಳಿಗೆ ತೋರಿಸಲು ಮಾರ್ಗದರ್ಶಿ ಸೂತ್ರಗಳ ಒಂದು ಪ್ರತಿಯನ್ನು ನಾನೇ ಕೊಂಡು ಹೋಗಬೇಕಾಯಿತು’’ ಎಂದಿದ್ದಾಳೆ 18ರ ಹರೆಯದ ವಿದ್ಯಾರ್ಥಿನಿ ಮಿತಾಲಿ ಮಲ್ಹೋತ್ರಾ. ಅಲ್ಲದೆ ಅವಳ ಏರಿಯಾದ ವಿಭಾಗೀಯ ನ್ಯಾಯಾಧೀಶರು ಹದಿನೈದು ದಿನಗಳ ರಜೆಯಲ್ಲಿರುವುದರಿಂದ ತನ್ನ ದಾಖಲೆಗಳನ್ನು ಸಲ್ಲಿಸಲು ಆಕೆ ಜಿಲ್ಲಾ ನ್ಯಾಯಾಧೀಶರನ್ನು ಸಂಪರ್ಕಿಸಬೇಕಾಯಿತು.

ವಿದ್ಯಾರ್ಥಿಗಳ ಗೋಳು ಇಷ್ಟಕ್ಕೆ ಮುಗಿಯುವುದಿಲ್ಲ. ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಅವರಿಗೆ ಸ್ಥಿರಾಸ್ತಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳ ಜತೆಗೆ ಗುರುತು ಪುರಾವೆ, ಅವರ ಪೋಷಕರ ಕಳೆದ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಕಳೆದ ಮೂರು ವರ್ಷಗಳಲ್ಲಿ ಅವರು ಸಲ್ಲಿಸಿದ್ದ ಆದಾಯ ತೆರಿಗೆ ರಿಟರ್ನ್‌ಗಳ ದಾಖಲೆಗಳೂ ಬೇಕಾಗುತ್ತವೆ. ಮೂರು ವಾರಗಳ ಕಾಲ ಮಿತಾಲಿ ಮಲ್ಹೋತ್ರಾ ನ್ಯಾಯಾಧೀಶರ ಕಚೇರಿಗೆ ಅಲೆದಾಡಿದಳಾದರೂ ಅಧಿಕಾರಿಗಳು ಆಕೆ ಸಲ್ಲಿಸಿದ ದಾಖಲೆಗಳನ್ನು ತಿರಸ್ಕರಿಸುತ್ತಲೇ ಹೋದರು.
ಇನ್ನು ಪ್ರಮಾಣ ಪತ್ರ ಪಡೆಯದವರು, ಜಿಲ್ಲಾಧಿಕಾರಿಗಳು ನೀಡುವ ಒಂದು ‘ಸ್ವೀಕೃತ ರಶೀದಿ’ ಸಲ್ಲಿಸಿದರೆ ಸಾಕೆಂದು ದಿಲ್ಲಿ ವಿವಿ ಹೇಳಿತು. ಆದರೆ ‘‘ಆ

ಅಧಿಕಾರಿ ನನ್ನ ಅರ್ಜಿಯ ಮೇಲೆ ಮುದ್ರೆಯೊಂದನ್ನು ಒತ್ತಿ ಅದನ್ನು ತನ್ನ ಬಳಿಯೇ ಇಟ್ಟುಕೊಂಡರು, ಆದರೆ ರಶೀದಿ ನೀಡಲಿಲ್ಲ’’ ಎಂದಿದ್ದಾಳೆ ಮಖಿಜನಿ. ಹಲವಾರು ವಿದ್ಯಾರ್ಥಿಗಳಿಗೂ ಹೀಗೆಯೇ ಆಗಿದೆ.

 ಇನ್ನು ರಶೀದಿ ಪಡೆದ ಕೆಲವು ವಿದ್ಯಾರ್ಥಿಗಳಿಗೂ ಅವರ ಸಮಸ್ಯೆ ಕೊನೆಗಾಣಲಿಲ್ಲ. ಪರಿಶೀಲನೆಯ ಹಂತದಲ್ಲಿ ತನ್ನ ಅರ್ಜಿಯನ್ನು ತಿರಸ್ಕರಿಸಲಾಯಿತು ಎಂದಿದ್ದಾಳೆ 18ರ ಹರೆಯದ ಯಶ್ ಸಿಂಘಲ್. ‘‘ಜಿಲ್ಲೆಯ ಅಧಿಕಾರಿಗಳು ನನ್ನ ಅಜ್ಜನ ಮನೆಗೆ ಬಂದು ಅದನ್ನು ನೋಡಿ ನಮ್ಮ ಕುಟುಂಬಕ್ಕೆ ಅದು ತೀರ ದೊಡ್ಡದಾಗಿದೆ; ಆದ್ದರಿಂದ ನಾನು ಮೀಸಲಾತಿ ಕೋಟಾಕ್ಕೆ ಅರ್ಹಳಾಗುವುದಿಲ್ಲ ಎಂದು ಅವರು ಹೇಳಿದರು’’ ಎನ್ನುತ್ತಾಳೆ ಆಕೆ. ಆದರೆ ಅದೇ ಮನೆಯಲ್ಲಿ ಮೂರು ಕುಟುಂಬಗಳು ವಾಸಿಸುತ್ತಿವೆ! ಇದನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳಲಿಲ್ಲ.

ಕೋಟಾಕ್ಕೆ ಯಾರು ಅರ್ಹರು?

ಸರಕಾರ ಹೊರಡಿಸಿರುವ ಒಂದು ಅಧಿಸೂಚನೆಯ ಪ್ರಕಾರ ಎಸ್ಸಿ, ಎಸ್ಟಿ, ಒಬಿಸಿಗಳ ಕೇಂದ್ರೀಯ ಯಾದಿಯಲ್ಲಿ ಇಲ್ಲದ ಸಮುದಾಯಗಳವರು ಮಾತ್ರ ಇಡಬ್ಲುಎಸ್ ಕೆಟಗರಿಯಲ್ಲಿ ಮೀಸಲಾತಿಗೆ ಅರ್ಹರು. ಆದರೆ ದಿಲ್ಲಿ ಸರಕಾರದ ಅಧಿಸೂಚನೆಯಲ್ಲಿ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳೆಂದು ಪರಿಗಣಿಸಲ್ಪಟ್ಟವರು ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ. ಅಂದರೆ ಕೆಲವು ಸಮುದಾಯಗಳು ಎಸ್ಸಿ ಎಂದು ಕೇಂದ್ರ ಮಟ್ಟದ ಯಾದಿಯಲ್ಲಿ ಸೇರ್ಪಡೆಗೊಂಡಿದ್ದರೆ, ರಾಜ್ಯಮಟ್ಟದ ಯಾದಿಯಲ್ಲಿ ಅವುಗಳು ಸೇರ್ಪಡೆಯಾಗದೆ ಇದ್ದಿರಬಹುದು.

 ಈ ಕೋಟಾದ ಅನುಷ್ಠಾನಕ್ಕೆ ಎದುರಾಗಿರುವ ಇನ್ನೊಂದು ದೊಡ್ಡ ಸವಾಲು ಎಂದರೆ ಶೇ. 25ರಷ್ಟು ಸೀಟುಗಳ ಹೆಚ್ಚಳ. ದಿಲ್ಲಿ ವಿವಿ ಇದನ್ನು ಈ ವರ್ಷ ಶೇ. 10 ಮತ್ತು ಮುಂದಿನ ವರ್ಷ ಶೇ. 15 ಎಂದು ನಿರ್ಧರಿಸಿದೆ. ಆದರೆ ಶೇ. 10 ಎಂದರೆ ಸುಮಾರು 6,000 ಸೀಟುಗಳಾಗುತ್ತದೆ. ಈಗಾಗಲೇ ವಿವಿಯಲ್ಲಿ 56,000 ಸೀಟುಗಳಿವೆ. ಹೀಗಿರುವಾಗ ದಿಲ್ಲಿ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳು ಅದು ಹೇಗೆ ಈ ಸವಾಲನ್ನು ಎದುರಿಸುವುದು? ಅವು ಹೆಚ್ಚು ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ. ಆದರೆ ಶೇ. 10 ಹೆಚ್ಚಳ ಈ ನೇಮಕಕ್ಕೂ ಅನ್ವಯವಾಗುತ್ತದೆಯೇ? ಈ ಬಗ್ಗೆ ಸ್ಪಷ್ಟನೆ ಇಲ್ಲ.


ಕೃಪೆ: scroll.in

Writer - ವಿಜಯ್‌ತಾ ಲಾಲ್ವಾನಿ

contributor

Editor - ವಿಜಯ್‌ತಾ ಲಾಲ್ವಾನಿ

contributor

Similar News