ಫೆಡರರ್‌ಗೆ 2ನೇ ಶ್ರೇಯಾಂಕ, 3ನೇ ಶ್ರೇಯಾಂಕಕ್ಕೆ ಜಾರಿದ ನಡಾಲ್

Update: 2019-06-26 18:59 GMT

ಲಂಡನ್, ಜೂ.26: ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 8 ಬಾರಿಯ ಚಾಂಪಿಯನ್ ರೋಜರ್ ಫೆಡರರ್ ದ್ವಿತೀಯ ಶ್ರೇಯಾಂಕ ಪಡೆದರೆ, ವಿಶ್ವದ ನಂ.1 ಆಟಗಾರನಾಗಿರುವ ಸ್ಪೇನ್‌ನ ರಫೆಲ್ ನಡಾಲ್ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ಕಳೆದ ಋತುವಿನಲ್ಲಿ ಜೊಕೊವಿಕ್‌ಗೆ ಶರಣಾಗಿ ಎರಡನೇ ಸ್ಥಾನ ಪಡೆದಿದ್ದ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಎಟಿಪಿ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದಿರುವ ಹೊರತಾಗಿಯೂ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ನಡಾಲ್ ಮೂರನೇ ಶ್ರೇಯಾಂಕ ಪಡೆದಿರುವ ಹಿನ್ನೆಲೆಯಲ್ಲಿ 2010ರ ಬಳಿಕ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪ್ರಶಸ್ತಿ ಜಯಿಸಬೇಕಾದರೆ ಫೆಡರರ್ ಹಾಗೂ ಜೊಕೊವಿಕ್‌ರನ್ನು ಮಣಿಸಬೇಕು.

ಫ್ರೆಂಚ್ ಓಪನ್ ರನ್ನರ್ಸ್-ಅಪ್ ಹಾಗೂ ವಿಶ್ವದ ನಂ.4ನೇ ಆಟಗಾರ ಡೊಮಿನಿಕ್ ಥೀಮ್ ನಾಲ್ಕನೇ ಶ್ರೇಯಾಂಕ ಪಡೆದಿದ್ದು, ಅಂತಿಮ 8ರ ಸುತ್ತಿನಲ್ಲಿ ಜೊಕೊವಿಕ್, ಫೆಡರರ್ ಅಥವಾ ನಡಾಲ್‌ರನ್ನು ಎದುರಿಸಲಿದ್ದಾರೆ.

ನೂತನ ನಂ.1 ಆಟಗಾರ್ತಿ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಗಿಟ್ಟಿಸಿಕೊಂಡಿದ್ದಾರೆ.

  ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಡಬ್ಲುಟಿಎ ರ್ಯಾಂಕಿಂಗ್ ಪ್ರಕಾರ 11ನೇ ಶ್ರೇಯಾಂಕ ಪಡೆದಿದ್ದಾರೆ. ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ಕಳೆದ ವರ್ಷ 183ನೇ ರ್ಯಾಂಕಿನಲ್ಲಿದ್ದ ಹೊರತಾಗಿಯೂ 25ನೇ ಶ್ರೇಯಾಂಕ ನೀಡಲಾಗಿತ್ತು. ವಿಂಬಲ್ಡನ್‌ನಲ್ಲಿ ಆಟಗಾರರ ಶ್ರೇಯಾಂಕ ನಿರ್ಧರಿಸಲು ಕಳೆದ 24 ತಿಂಗಳ ಫಾರ್ಮ್‌ನ್ನು ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News