ವಿಶ್ವಕಪ್: ಪಾಕ್ ಪಾಲಿಗೆ 1992ರ ಇತಿಹಾಸ ಮರುಕಳಿಸುತ್ತದೆಯೇ?

Update: 2019-06-27 04:46 GMT

ಎಜ್ಬಾಸ್ಟನ್, ಜೂ.27: ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಪಾಲಿಗಂತೂ ಅಕ್ಷರಶಃ ಸತ್ಯವಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂಝಿಲೆಂಡ್ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಗಳಿಸಿದ ಪಾಕಿಸ್ತಾನ ತಂಡ ಹಲವು ವಿಧದಲ್ಲಿ 1992ರ ನೆನಪನ್ನು ತೆರೆದಿಟ್ಟಿದೆ.

1992ರ ವಿಶ್ವಕಪ್‌ನ ಮೊದಲ ಆರು ಪಂದ್ಯಗಳ ಪೈಕಿ ಮೊದಲ ಪಂದ್ಯವನ್ನು ಪಾಕಿಸ್ತಾನ ಸೋತಿತ್ತು. ಎರಡನೇ ಪಂದ್ಯ ಗೆದ್ದರೆ ಮೂರನೇ ಪಂದ್ಯ ರದ್ದಾಗಿತ್ತು. ಆ ಬಳಿಕ ಎರಡು ಸೋಲು ಹಾಗೂ ಒಂದು ಗೆಲುವನ್ನು ಕಂಡಿತ್ತು. ಅಂತಿಮವಾಗಿ ಪಾಕಿಸ್ತಾನ ವಿಶ್ವಕಪ್ ಗೆದ್ದಿತ್ತು!

ಈ ಬಾರಿಯ ಮೊದಲ ಆರು ಪಂದ್ಯಗಳಲ್ಲಿ 1992ಕ್ಕೆ ಅನುರೂಪವಾದ ಫಲಿತಾಂಶ ಬಂದಿದೆ. ಎರಡು ಬಾರಿಯೂ ಏಳನೇ ಗೆಲುವು ಅಜೇಯ ನ್ಯೂಝಿಲೆಂಡ್ ವಿರುದ್ಧ ಬಂದಿರುವುದು ಮತ್ತೊಂದು ವಿಶೇಷ. 1992ರ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ಜಯ ಸಾಧಿಸಿತ್ತು. ಅಮೀರ್ ಸೊಹೈಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರನೇ ಪಂದ್ಯವನ್ನು ಪಾಕ್ ಜಯಿಸಿದ್ದು ಹಾರಿಸ್ ಸೊಹೈಲ್ ಪಂದ್ಯಶ್ರೇಷ್ಠ!

1992ರಲ್ಲಿ ಪಾಕಿಸ್ತಾನ ಇನ್ನೂ 5 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಸಾಧಿಸಿತ್ತು. ರಮೀಝ್ ರಾಜಾ ಅಜೇಯ 119 ರನ್ ಗಳಿಸಿದ್ದರು. ಇದೀಗ ಬಾಬರ್ ಅಝಾಮ್ 101 ರನ್ ಗಳಿಸಿ, 5 ಎಸೆತಗಳಿರುವಂತೆಯೇ ಪಾಕ್ ಜಯಭೇರಿ ಬಾರಿಸಿದ್ದನ್ನು ನೆಟ್ಟಿಗರು ಉಲ್ಲೇಖಿಸಿದ್ದಾರೆ.

ಈ ಮಧ್ಯೆ ಪಾಕಿಸ್ತಾನದ ನಾಯಕ ಸರ್ಫ್ರಾಝ್ ಅಹ್ಮದ್ ಅವರಿಗಂತೂ ಈ ಸಾಮ್ಯತೆ ಖುಷಿ ಕೊಟ್ಟಿದೆ. "ನಾವು 1992ರ ವಿಶ್ವಕಪ್ ಬಗ್ಗೆ ಯೋಚಿಸುತ್ತಿದ್ದೇವೆ. ಪಂದ್ಯದಿಂದ ಪಂದ್ಯಕ್ಕೆ ನಾವು ಸುಧಾರಿಸುತ್ತಿದ್ದೇವೆ. ತಂಡವಾಗಿ ನಮ್ಮಲ್ಲಿ ವಿಶ್ವಾಸ ಮೂಡಿದೆ. ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದೇವೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News