​ಬಾಂಬ್ ಬೆದರಿಕೆ: ಸುರಕ್ಷತೆಗಾಗಿ ಲಂಡನ್‌ನಲ್ಲಿ ಇಳಿದ ಏರ್‌ಇಂಡಿಯಾ ವಿಮಾನ

Update: 2019-06-28 03:49 GMT

ಮುಂಬೈ: ಮುಂಬೈನಿಂದ ನ್ಯೂಯಾರ್ಕ್‌ಗೆ 327 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಇಂಡಿಯಾ ವಿಮಾನ, ಐರ್ಲೆಂಡ್‌ನ ವಾಯುಪ್ರದೇಶದಲ್ಲಿ ಹಾರುತ್ತಿದ್ದಾಗ ಬಂದ ಬಾಂಬ್ ಬೆದರಿಕೆಯ ಸಂದೇಶದಿಂದಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಲಂಡನ್‌ನಲ್ಲಿ ಇಳಿದ ಘಟನೆ ಗುರುವಾರ ನಡೆದಿದೆ.

ಇಸ್ರೇಲ್ ವಿರೋಧಿ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. "ವಿಮಾನದ ಇಂಧನದಲ್ಲಿ ಸ್ಫೋಟಕಗಳನ್ನು ಸೇರಿಸಲಾಗಿದೆ. ಮೂರು ವಿಮಾನಗಳನ್ನು ಗುರಿ ಮಾಡಲಾಗಿದ್ದು, ಅವುಗಳ ಪೈಕಿ ಎಐ 191 ಕೂಡಾ ಒಂದು ಎಂದು ಸಂದೇಶದಲ್ಲಿ ವಿವರಿಸಲಾಗಿತ್ತು" ಎಂದು ಉನ್ನತ ಮೂಲಗಳು ಹೇಳಿವೆ.

ತಕ್ಷಣ ವಿಮಾನದ ಪೈಲಟ್‌ಗೆ ಸಂದೇಶ ವರ್ಗಾಯಿಸಲಾಯಿತು. ಒಂದು ಗಂಟೆಯಲ್ಲಿ ವೈಮಾನಿಕ ಭದ್ರತಾ ತುರ್ತು ಸ್ಥಿತಿಗಾಗಿಯೇ ಮೀಸಲಾಗಿರುವ ಲಂಡನ್‌ನ ಸ್ಟ್ಯಾನ್‌ಸ್ಟೆಡ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಏರ್ ಇಂಡಿಯಾ ಬೋಯಿಂಗ್ 777ಗೆ ಬ್ರಿಟಿಷ್ ರಾಯಲ್ ಏರ್‌ಫೋರ್ಸ್‌ನ ಎರಡು ಸೂಪರ್‌ಸಾನಿಕ್ ಟೈಫೂನ್‌ಗಳನ್ನು ಬೆಂಗಾವಲಾಗಿ ನೀಡಲಾಯಿತು. ಅನುಮಾನಾಸ್ಪದ ವಿಮಾನಕ್ಕೆ ಸಂಭಾವ್ಯ ಅಪಾಯ ತಡೆಯುವ ಸಲುವಾಗಿ ಅಗತ್ಯ ವ್ಯವಸ್ಥೆ ಮಾಡಲಾಯಿತು. ಇದರಿಂದ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಆತಂಕ- ಗೊಂದಲಕ್ಕೆ ಸಿಲುಕಿದರು.

ವಿಮಾನ ಸ್ಟ್ಯಾನ್‌ಸ್ಟೆಡ್‌ನಲ್ಲಿ ಇಳಿಯುತ್ತಿದ್ದಂತೆ ಏರ್‌ಇಂಡಿಯಾ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಇಳಿಸಲಾಗಿದೆ ಎಂಬ ಮಾಹಿತಿ ನೀಡಿತು. ಸ್ಟ್ಯಾನ್‌ಸ್ಟೆಡ್ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಆರ್‌ಎಎಫ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದವು. ವಿಮಾನದ ಏಣಿಯ ಬಳಿ ಪ್ರಯಾಣಿಕರು ಸಾಲುಗಟ್ಟಿ ನಿಂತಿರುವುದು ಹಾಗೂ ಭದ್ರತಾ ಪಡೆ ಹಾಗೂ ಶ್ವಾನಪಡೆ ತಪಾಸಣೆ ನಡೆಸುತ್ತಿರುವ ಚಿತ್ರಗಳು ಟ್ವಿಟ್ಟರ್‌ನಲ್ಲಿ ಕಂಡುಬಂದವು. ಜತೆಗೆ ಏರ್‌ಇಂಡಿಯಾ ವಿಮಾನದ ಜತೆಜತೆಗೆ ಆರ್‌ಎಎಫ್ ಜೆಟ್ ಬೆಂಗಾವಲು ವಿಮಾನಗಳು ಹಾರಾಡುತ್ತಿರುವ ಚಿತ್ರ ಕೂಡಾ ಪ್ರಕಟವಾಯಿತು.

ಈ ವಿಮಾನ ಮುಂಬೈನಿಂದ ಮೂರು ಗಂಟೆ ತಡವಾಗಿ ಹೊರಟಿತ್ತು. ಮಧ್ಯರಾತ್ರಿಯ 1.30ಕ್ಕೆ ಹೊರಡಬೇಕಾದ ವಿಮಾ ಮುಂಜಾನೆ 4.50ಕ್ಕೆ ಹೊರಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News