ಶಿಕ್ಷಣ ಮತ್ತು ಸಾಮೂಹಿಕ ಒಳಿತಿನ ಚಿಂತನೆ

Update: 2019-06-29 04:21 GMT

ಸಾಮೂಹಿಕ ಒಳಿತಿನ ಬಗೆಗಿನ ಚಿಂತನೆಗಳು ಹಾಗೂ ಶಿಕ್ಷಣದ ಬಗೆಗಿನ ಚಿಂತನೆಗಳು ಸದಾ ಒಂದರೊಳಗೊಂದು ಬೆಸೆದುಕೊಂಡಿರುತ್ತವೆ. ಶಿಕ್ಷಣ ಮತ್ತು ಒಳಿತಿನ ಈ ಬೆಸುಗೆಯು ನೈತಿಕ ಗ್ರಹಿಕೆಗಳ ಉನ್ನತ ಹಂತಗಳಲ್ಲಿ ವ್ಯಕ್ತವಾಗುತ್ತವೆ. ನೈತಿಕ ಒಳಿತಿಗೆ ಯಾವಾಗಲೂ ಎರಡು ಆಯಾಮಗಳಿರುತ್ತವೆ: ವೈಯಕ್ತಿಕ ಒಳಿತು ಮತ್ತು ಸಾಮೂಹಿಕ ಒಳಿತು. ಸಾಮೂಹಿಕ ಒಳಿತೆನ್ನುವುದು ಆದರ್ಶಪ್ರಾಯವಾದರೆ ವೈಯಕ್ತಿಕ ಒಳಿತೆನ್ನುವುದು ಅಸ್ತಿತ್ವದ ತುರ್ತಿನದು. ಸಾಮೂಹಿಕ ಒಳಿತೆನ್ನುವುದು ಶಾಂತಿ, ಸೌಹಾರ್ದ ಮತ್ತು ಮಾನವ ಘನತೆಗೆ ಗೌರವ ನೀಡಬೇಕೆಂಬ ವಿಶ್ವಾತ್ಮಕ ಒತ್ತಾಸೆಗಳನ್ನು ಹೊಂದಿರುತ್ತವೆ. ಸಾಮೂಹಿಕ ಒಳಿತಿನ ಚಿಂತನೆಗಳು ಜಾತಿ, ಲಿಂಗ, ವರ್ಣ ಮತ್ತು ಧರ್ಮದ ನಿರ್ದಿಷ್ಟ ಸೀಮೆಗಳನ್ನು ಮೀರಿದ ಮಾನವೀಯ ಮೌಲ್ಯಗಳನ್ನು ಹೊಂದಿರುತ್ತವೆ. ಈ ಮೌಲ್ಯಗಳು ನಮ್ಮ ಸಂವಿಧಾನದ ಅಂತರ್ಗತ ಭಾಗವಾಗಿದ್ದು 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲೂ ಕೂಡಾ ಅವು ಪ್ರಸ್ತಾಪಿಸಲ್ಪಟ್ಟಿವೆ. ಈ ಮೌಲ್ಯಗಳನ್ನು ಶಿಕ್ಷಣದ ಮೂಲಕ ಪ್ರಸಾರ ಮಾಡಬೇಕಿರುವ ಅಗತ್ಯವಿದೆ. ಮಕ್ಕಳ ಕಲಿಕಾ ಪ್ರಕ್ರಿಯೆಯ ಭಾಗವಾಗಿ ಶಿಕ್ಷಣದಲ್ಲಿ ಈ ಮೌಲ್ಯಗಳು ಸಹಜವಾಗಿ ಬೆಸೆದುಕೊಳ್ಳಬೇಕು. ಉಪಾಧ್ಯಾಯರ ಗುಣಮಟ್ಟದ ಮೌಲ್ಯಮಾಪನವು ಈ ಸಾಮೂಹಿಕ ಒಳಿತಿನ ಪ್ರಸ್ತುತಿಗೆ ಅಡ್ಡಿಯೊಡ್ಡಬಲ್ಲ ತನ್ನ ಹಾಗೂ ತನ್ನ ವಿದ್ಯಾರ್ಥಿಗಳಲ್ಲಿನ ಪ್ರತಿಗಾಮಿ ಮೌಲ್ಯಗಳನ್ನು ನಿರುತ್ತೇಜಿಸಬಲ್ಲಷ್ಟು ಗ್ರಹಿಕಾ ಸಾಮರ್ಥ್ಯವಿದೆಯೇ ಎಂಬುದನ್ನು ಆಧರಿಸಿ ನಡೆಯಬೇಕು.

ಶಿಕ್ಷಣವು ಪ್ರತಿಗಾಮಿ ಮೌಲ್ಯಗಳನ್ನು ಸ್ವಚಿಂತನೆಯ ಮೂಲಕವೇ ತಿರಸ್ಕರಿಸುತ್ತಾ ಸಾಮೂಹಿಕ ಒಳಿತಿನ ಬಗ್ಗೆ ಇರುವ ವಿಶ್ವಾತ್ಮಕ ಪರಿಕಲ್ಪನೆಯನ್ನು ಅನುಮೋದಿಸುವ ಅವಕಾಶವನ್ನು ಒದಗಿಸುತ್ತದೆ. ಸ್ವಚಿಂತನೆಯು ಇತರರ (ಸ್ವಾರ್ಥ ರಾಜಕಾರಣಿಗಳು, ಸಂಪ್ರದಾಯವಾದಿ ಪೋಷಕರು ಮತ್ತು ಗೊಡ್ಡು ವಿಶ್ವಾಸಗಳು) ಚಿಂತನೆಗಳ ಮೇಲೆ ಅವಲಂಬಿಸುವುದನ್ನು ಅಥವಾ ಯಾಂತ್ರಿಕ ಸೈದ್ಧಾಂತಿಕ ಸೂತ್ರಗಳ ಮೇಲೆ ಆಧರಿಸುವುದನ್ನು ಕಡಿಮೆಯಾಗುವಂತೆ ಮಾಡುತ್ತದೆ. ಸ್ವಂತ ಗ್ರಹಿಕಾ ಸಾಮರ್ಥ್ಯವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಸ್ವತಂತ್ರ ತೀರ್ಮಾನಗಳನ್ನೂ ತೆಗೆದುಕೊಳ್ಳಬಲ್ಲರೆಂದು ನಿರೀಕ್ಷಿಸಬಹುದು. ಆದರೆ ಕೆಳಹಂತಗಳಲ್ಲಿ ಸಾಮೂಹಿಕ ಒಳಿತನ್ನು ಒಳಗೊಂಡಿರುವ ಮೌಲ್ಯಗಳನ್ನು ಪ್ರಚುರ ಪಡಿಸಲು ಬೇಕಾದ ಶೈಕ್ಷಣಿಕ ಸಾಧನಗಳನ್ನು ಅಳವಡಿಸಬೇಕಾದ ಅಗತ್ಯವಿದೆ. ಸಾಮೂಹಿಕ ಒಳಿತನ್ನು ಒಳಗೊಂಡ ವಿಶ್ವಾತ್ಮಕ ಮೌಲ್ಯಗಳನ್ನು ಪ್ರಚುರ ಪಡಿಸಲು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿವಿಧ ಹಿನ್ನೆಲೆಯುಳ್ಳವರು ಇರುವ ಶಾಲಾ ತರಗತಿಗಳು ಅದ್ಭುತವಾದ ಅವಕಾಶವನ್ನು ಒದಗಿಸುತ್ತವೆ. ಆದರೆ ಇಂತಹ ಮೌಲ್ಯಗಳ ಪ್ರಚಾರಗಳು ಹಾದುಹೋಗಬೇಕಿರುವ ಹಾದಿಯು ಅಷ್ಟೇನೂ ಸುರಕ್ಷಿತವಾಗಿಲ್ಲ. ಇದಕ್ಕೆ ಸಾರ್ವಜನಿಕ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಹಲವು ಬಗೆಯ ಸಮಸ್ಯೆಗಳೇ ಕಾರಣ. ಈ ಸಂಸ್ಥೆಗಳು ತಮ್ಮ ಅರ್ಥಪೂರ್ಣ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯುಳ್ಳವರು ಅದರ ಮರುಸ್ಥಾಪನೆಯಲ್ಲಿ ಹೆಚ್ಚು ಕಾಳಜಿ ವಹಿಸದಿರುವುದು ಮತ್ತೊಂದು ಗಂಭೀರವಾದ ಸಮಸ್ಯೆ. ಇದು ಶಿಕ್ಷಣದ ಮೇಲೆ ವ್ಯಯಿಸಲು ಬೇಕಾದಷ್ಟು ಸಂಪನ್ಮೂಲಗಳಿಲ್ಲದಿದ್ದರೂ ಸಹ ಸಾರ್ವಜನಿಕ ಶಿಕ್ಷಣಸಂಸ್ಥೆಗಳಿಂದ ಹೆಚ್ಚೆಚ್ಚು ದೂರ ಸರಿಯುತ್ತಾ ಖಾಸಗಿ ಶಾಲೆ ಅಥವಾ ಕೋಚಿಂಗ್ ಕೇಂದ್ರಗಳ ಮೊರೆಹೋಗುತ್ತಿರುವ ಪೋಷಕರ ವಿಷಯದಲ್ಲಿ ಮತ್ತಷ್ಟು ನಿಜ. ಇದಕ್ಕೆ ಪೋಷಕರನ್ನು ಮಾತ್ರ ದೂಷಿಸುವುದರಲ್ಲಿ ಅರ್ಥವಿಲ್ಲ. ಬಡವರ್ಗಗಳಿಗೆ ಸೇರಿದ ಪೋಷಕರಲ್ಲಿ ಒಂದು ವರ್ಗವು ತಮ್ಮ ಮಕ್ಕಳಿಗೆ ಉತ್ತಮ ಮಧ್ಯಾಹ್ನದ ಬಿಸಿಯೂಟವನ್ನು ಮಾತ್ರವಲ್ಲದೆ ನಿರಂತರವಾಗಿ ಉತ್ತಮ ಗುಣಮಟ್ಟದ ಉಪಾಧ್ಯಾಯರನ್ನು ಸಹ ಒದಗಿಸಬೇಕೆಂದು ಸ್ಥಳೀಯ ಸರಕಾರಿ ಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಬೆಳವಣಿಗೆಯು ಇನ್ನೊಂದು ಗಂಭೀರ ಪ್ರಶ್ನೆಯನ್ನು ಕೇಳುವಂತೆ ಮಾಡಬೇಕು: ಖಾಸಗಿ ಶಾಲಾ ಸಂಸ್ಥೆಗಳು ಸಾಮೂಹಿಕ ಒಳಿತನ್ನು ಪ್ರಚುರ ಪಡಿಸುವ ಪ್ರಶ್ನೆಯನ್ನು ಹೇಗೆ ನಿಭಾಯಿಸುತ್ತವೆ? ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವವರು ಖಾಸಗಿ ಸಂಸ್ಥೆಗಳಲ್ಲಿ ಬಡಮಕ್ಕಳಿಗೆ ಅಲ್ಪಸ್ವಲ್ಪಅವಕಾಶ ದೊರೆಯುತ್ತಿರುವ ಬಗ್ಗೆ, ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಅಲ್ಪತೃಪ್ತಿಯನ್ನು ಪಡಬಾರದು. 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಪ್ರಸ್ತಾಪಿತವಾಗಿರುವ ಸ್ಥಾನ ಸಮಾನತೆಯ ಧೋರಣೆಯು ವಿದ್ಯಾರ್ಥಿಗಳಲ್ಲಿ ಮತ್ತು ಉಪಾಧ್ಯಾಯರಲ್ಲಿ ಈ ಮೌಲ್ಯಗಳು ಸಹಜವಾಗಿ ನೆಲೆ ಕಾಣುವಂತೆ ಮಾಡಬಲ್ಲದೇ?

ಉದ್ದುದ್ದವಾಗಿಯೂ ಮತ್ತು ಅಡ್ಡಡ್ಡವಾಗಿಯೂ ವಿಭಜಿತವಾಗಿರುವ ನಮ್ಮ ಸಾಮಾಜಿಕ ಸಂಬಂಧಗಳಲ್ಲಿರುವ ಸಾಮಾಜಿಕ ಅಂತರವನ್ನು ಮೊದಲು ನಿರ್ಮೂಲನೆ ಮಾಡಬೇಕಿದೆ. 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಉನ್ನತ ಗುಣಮಟ್ಟದ ಖಾಸಗಿ ಶಾಲೆಗಳಿಗೆ ಅಥವಾ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಯಾಗುವಂತೆ ಮಾಡುವ ಕ್ರಮಗಳ ಪ್ರಸ್ತಾಪವಿದೆ. ಆದರೆ ಈ ಕ್ರಮಗಳು ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕವಾಗಿ ಅಂತರ್ಗತವಾಗಿರುವ ಸಮಸ್ಯೆಗಳಿಗೆ ದಿಢೀರ್ ಉತ್ತರವನ್ನು ಹುಡುಕುವ ಪ್ರತಿಕ್ರಿಯೆಗಳಷ್ಟೇ ಆಗಿರುತ್ತವೆ. ಏಕೆಂದರೆ ನಮ್ಮ ನೀತಿ ನಿರೂಪಕರು ನಮ್ಮ ಸಮಾಜದಲ್ಲಿನ ಜಾತಿ ಮತ್ತು ಲಿಂಗಗಳು ಉಂಟು ಮಾಡಿರುವ ಸಾಮಾಜಿಕ ಅಂತರಗಳು ಈಗಾಗಲೇ ನಿವಾರಣೆಯಾಗಿವೆ ಎಂದು ಭಾವಿಸುತ್ತಾರೆ. ಈ ಆಳವಾದ ಬಿಕ್ಕಟ್ಟಿನೆಡೆಗೆ ಗಮನ ಕೊಡದಿದ್ದರೆ ಕರಡು ನೀತಿಯಲ್ಲಿ ಪ್ರಸ್ತಾಪಿತವಾಗಿರುವ ಈ ಕ್ಷೇತ್ರದ ಸಂಘಟನಾ ಏಕೀಕರಣವೂ ಸಹ ಮೇಲ್ಮಟ್ಟದ್ದಾಗಿ ಮಾತ್ರ ಉಳಿದುಬಿಡುತ್ತದೆ. ಸಾಮೂಹಿಕ ಒಳಿತಿರುವುದು ವ್ಯವಸ್ಥಾಗತ ಅಸಮಾನತೆಯನ್ನು ನಿವಾರಿಸುವುದರಲ್ಲೇ ವಿನಃ ಸಾಮಾಜಿಕವಾಗಿ ಅಂಚಿನಲ್ಲಿರುವ ಕೆಲ ಮಕ್ಕಳನ್ನು ಕುಲೀನ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸಿಕೊಳ್ಳುವುದರಲ್ಲಲ್ಲ.

ಅಲಕ್ಷಿತ ಸಮುದಾಯಕ್ಕೆ ಸೇರಿದ ಮಕ್ಕಳು ಶಾಲಾ ಮತ್ತು ಕಾಲೇಜುಗಳಿಂದ ಹೆಚ್ಚೆಚ್ಚು ಹೊರಗುಳಿಯುತ್ತಿರುವುದರಲ್ಲಿ ಅಸ್ತಿತ್ವದಲ್ಲಿರುವ ರಾಚನಿಕ ಅಸಮಾನತೆಯು ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುತ್ತಿದೆ. ಕರಡು ನೀತಿಯಲ್ಲಿ ಪ್ರಸ್ತಾಪಿಸಿರುವಂತೆ ಶಿಕ್ಷಣವು ಸಮಾನವಾಗಿ ಲಭ್ಯವಾಗಲು ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮುಖ್ಯವಾದ ವಿಷಯವೇ. ಆದರೆ ಶಿಕ್ಷಣದ ಕರಡಿನ ಮುಂಗಾಣ್ಕೆಯಲ್ಲಿ ಪ್ರಸ್ತಾಪಿತವಾಗಿರುವಂತಹ ಉತ್ತಮ ಸಮಾಜ ಸಾಕಾರವಾಗಬೇಕೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಅದಕ್ಕೆ ಪೂರಕವಾದ ಸಾಮಾಜಿಕ ಚಿಂತನೆಗಳ ವಿಸ್ತರಣೆಯಾಗಬೇಕಿದೆ. ಕರಡಿನಲ್ಲಿ ಪ್ರಸ್ತಾಪಿತವಾಗಿರುವಂತೆ ಈ ಮೌಲ್ಯಗಳು ಸಾಕಾರಗೊಳ್ಳಬೇಕೆಂದರೆ ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿರುವವರು ಅದಕ್ಕೆ ಬೇಕಾದ ನೈತಿಕ ಮೌಲ್ಯಗಳನ್ನು ಒಳಗೊಳ್ಳುವುದೂ ಸಹ ಅತ್ಯಗತ್ಯವಾಗಿದೆ. ಆದರೆ ಖಾಸಗಿ ಆಸಕ್ತಿಗಳಿಂದ ಪ್ರೇರಿತವಾದ ಶಿಕ್ಷಣ ವ್ಯವಸ್ಥೆ ಮತ್ತು ನಿತ್ಯ ಜೀವನದಲ್ಲಿ ಸಾಮೂಹಿಕ ಒಳಿತಿನ ಮೌಲ್ಯಗಳು ಹಾಸುಹೊಕ್ಕಾಗಲು ಬೇಕಿರುವ ಆಚರಣಾಶೀಲ ನೈತಿಕ ಬದ್ಧತೆಗಳ ನಡುವಿನ ಘರ್ಷಣೆಗಳು ಅವು ಸಾಕಾರಗೊಳ್ಳುವುದನ್ನು ಕಷ್ಟಸಾಧ್ಯವಾಗಿಸುತ್ತದೆ. ಒಬ್ಬ ವ್ಯಕ್ತಿಯು ಆಚರಣೆಯಲ್ಲಿ ಅನುಸರಿಸುವ ಮೌಲ್ಯಗಳಿಗೂ ಮತ್ತು ಇತರರೊಡನೆ ಸಂಬಂಧಗಳಲ್ಲಿ ಅನುಸರಿಸುವ ಮೌಲ್ಯಗಳಿಗೂ ನಡುವೆ ಇರುವ ಅಂತರವನ್ನು ಹೇಗೆ ನಿರ್ಮೂಲನೆ ಮಾಡಬೇಕೆಂಬುದು ಕರಡು ಶಿಕ್ಷಣ ನೀತಿಯು ಆದ್ಯತೆಯಲ್ಲಿ ಪರಿಗಣಿಸಬೇಕಾದ ವಿಷಯವಾಗಿದೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News