ಬೆಂಗಳೂರು: ಆಸ್ಟರ್ ಆರ್ ವಿ ಆಸ್ಪತ್ರೆಗೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ

Update: 2019-06-30 13:01 GMT

ಬೆಂಗಳೂರು, ಜೂ.30: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಇಂದಿಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಜೆ.ಪಿ.ನಗರದ ಆಸ್ಟರ್ ಆರ್‌ವಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚೆಚ್ಚು ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು. ಮಹಿಳೆಯರು ಬಂದರೆ ಮಾತೃ ವಾತ್ಸಲ್ಯ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಈ ಹಿಂದೆಯೇ ಸಶಕ್ತರಾಗಿದ್ದಾರೆ. ಆದರೆ, ಅವರಿಗೆ ಅವಕಾಶ ಸಿಗದಿದ್ದರಿಂದ ಅವಕಾಶಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ವೇಳೆ ಅವರಿಗೂ ಹಲವು ಕ್ಷೇತ್ರದಲ್ಲಿ ಅವಕಾಶ ನೀಡಿದರೆ ಮಹಿಳೆಯರು ಸಾಧನೆ ಮಾಡಬಲ್ಲರು. ಈಗಾಗಲೇ ಕಾನೂನು, ಕೃಷಿ ಸೇರಿದಂತೆ ಹಲವು ಪದವಿ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಿಶ್ವಮಟ್ಟದಲ್ಲಿ ಬೆಂಗಳೂರು ವೈದ್ಯಕೀಯ ಹಬ್ ಎಂದು ಗುರುತಿಸಿಕೊಂಡಿದೆ. ಉತ್ತಮ ಆರೋಗ್ಯ ಸೌಲಭ್ಯಗಳು ಇಲ್ಲಿ ಸಿಗುತ್ತಿದ್ದು, ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ವೈದ್ಯಕೀಯ ಸೇವೆ ಪಡೆಯಲು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಉತ್ತಮ ವೈದ್ಯರಿದ್ದರೂ, ಅಮೆರಿಕವನ್ನು ದಿಟ್ಟಿಸಿ ನೋಡುತ್ತಾರೆ. ಆದರೆ, ಅಮೆರಿಕದಲ್ಲಿ ತಂತ್ರಜ್ಞಾನ ಮುಂದುವರಿದಿರಬಹುದು, ಭಾರತದ ವೈದ್ಯಕೀಯ ಸೇವೆಗೂ, ಅಲ್ಲಿನ ಸೇವೆಗೂ ಸರಿಸಾಟಿಯಿಲ್ಲ ಎಂದರು.

ನಮ್ಮಲ್ಲಿ ಅಧಿಕವಿರವ ಭೂಮಿ ಮತ್ತು ಹಣ ಸಮಾಜ ಸೇವೆಗೆ ವಿನಿಯೋಗಿಸುವ ಕಡೆಗೆ ಯೋಚಿಸಬೇಕು. ತಮ್ಮ ಬಳಿ ಇಲ್ಲದಿದ್ದರೆ ಬೇರೆಯವರವರನ್ನು ಸೇವೆಗೆ ಮುಡುಪಾಗಿಡುವಂತೆ ಪ್ರೇರೇಪಿಸಬೇಕು ಎಂದ ಅವರು, ಎಲ್ಲವೂ ಸಮಾಜ ಸೇವೆಗೆ ಮುಕ್ತವಾಗಿರಬೇಕು ಎಂದು ನುಡಿದರು.

ನಮ್ಮ ಬಳಿ ಹಣ, ಕಾರು, ಬಂಗಲೆ, ಸಂಪತ್ತು ಇದ್ದರೂ, ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಸರ್ವಜನೋ ಸುಖಿನೋ ಭವಂತು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಜಗತ್ತಿನ ಎಲ್ಲರ ಬಗೆಗೂ ನಾವು ಕಾಳಜಿ ತೋರಿಸುತ್ತೇವೆ. ಕೇಂದ್ರ ಸರಕಾರ ದೇಶದಾದ್ಯಂತ ಪ್ರತಿಯೊಂದು ಕುಟುಂಬಕ್ಕೂ 5 ಲಕ್ಷ ರೂ. ಆರೋಗ್ಯ ಸೇವೆಗಾಗಿ ವಿನಿಯೋಗಿಸುತ್ತಿದೆ ಎಂದು ಹೇಳಿದರು.

ಆಸ್ಟರ್ ಡಿಎಂ ಹೆಲ್ತ್ಕೇರ್‌ನ ಸ್ಥಾಪಕಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಆಝಾದ್ ಮೂಪೆನ್ ಮಾತನಾಡಿ, ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಜನರ ವಿಶ್ವಾಸತೆ ಮೂಡಿಸಿರುವ ಆಸ್ಟರ್ ಹೆಲ್ತ್ಕೇರ್ ಹೆಬ್ಬಾಳದಲ್ಲಿ ಆರೋಗ್ಯ ಸೇವೆ ಆರಂಭಿಸಿತು. ಅದಾದ ಬಳಿಕ ಮೂರನೆ ವರ್ಷದಲ್ಲಿ ಮತ್ತೊಂದು ಆಸ್ಪತ್ರೆಯನ್ನು ಸಾರ್ವಜನಿಕರಿಗೆ ಅರ್ಪಿಸುವ ಮೂಲಕ ಆರೋಗ್ಯ ಸೇವೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಆರ್‌ವಿ ಸಂಸ್ಥೆಯ ನೆರವಿನೊಂದಿಗೆ ಬೆಂಗಳೂರಿನ ಹಲವು ಕಡೆಗಳಲ್ಲಿ ಆಸ್ಪತ್ರೆಯನ್ನು ತೆರೆಯುವ ಉದ್ದೇಶವಿದೆ ಎಂದು ಹೇಳಿದರು.

ಆರೋಗ್ಯ ಸೇವೆಗಳ ಜತೆಗೆ ಜನರಿಗೆ ಉದ್ಯೋಗ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಮಾಡಲಾಗುವುದು. ಬೆಂಗಳೂರು ಉದ್ಯಮಿ ಸ್ನೇಹಿ ವಾತಾವರಣ ಇದ್ದು ಬಂಡವಾಳ ಹೂಡಲು ಆರೋಗ್ಯಕರ ವಾತಾವರಣ ಇದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ, ಆರ್.ವಿ.ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಪಾಂಡುರಂಗಶೆಟ್ಟಿ, ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್, ಆರ್.ವಿ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎ.ವಿ.ಎಸ್.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಆಸ್ಟರ್ ಡಿಎಂ ಹೆಲ್ತ್ಕೇರ್ ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ದೊಡ್ಡ ಸಮಗ್ರ ಆರೋಗ್ಯ ಸೇವಾ ಜಾಲಗಳಲ್ಲಿ ಒಂದು ಹಾಗೂ ಭಾರತದ ಅತಿದೊಡ್ಡ ಆರೋಗ್ಯ ಕ್ಷೇತ್ರದ ಕಂಪನಿ ಎಂಬ ಖ್ಯಾತಿ ಪಡೆದಿದ್ದು, ಜಗತ್ತಿನ ವಿವಿಧೆಡೆ ಒಟ್ಟು 25 ಆಸ್ಪತ್ರೆಗಳು, 116 ಕ್ಲಿನಿಕ್‌ಗಳು, 219 ಫಾರ್ಮಸಿಗಳು ಹೊಂದಿದೆ. ಇಲ್ಲಿ ಸ್ಥಾಪಿಸಿರುವ ಆಸ್ಪತ್ರೆಯು ಒಂದೂವರೆ ಲಕ್ಷ ಚದರ ಅಡಿಗಿಂತ ಅಧಿಕ ವಿಶಾಲವಾಗಿದ್ದು, 39 ಹೊರ ರೋಗಿ ಕೊಠಡಿಗಳು, 9 ಶಸ್ತ್ರಚಿಕಿತ್ಸಾ ಕೊಠಡಿಗಳ ಸಹಿತ ಸಮಗ್ರ ಆರೋಗ್ಯ ಸೇವೆ ನೀಡುವ ವ್ಯವಸ್ಥೆಯಿದೆ ಹಾಗೂ ರಿಣಿತ ವೈದ್ಯ ತಜ್ಞರ ತಂಡಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News