ವಿಶ್ವಕಪ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ರಿಷಭ್ ಪಂತ್

Update: 2019-06-30 19:11 GMT

ಬರ್ಮಿಂಗ್‌ಹ್ಯಾಮ್, ಜೂ.30: ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ರವಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ರಿಷಭ್ ಪಂತ್ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದಾರೆ. ಕಾಲ್ಬೆರಳ ನೋವಿನಿಂದ ಬಳಲುತ್ತಿರುವ ಚೆನ್ನೈ ಆಲ್‌ರೌಂಡರ್ ವಿಜಯ ಶಂಕರ್ ಬದಲಿಗೆ ಪಂತ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಟೂರ್ನಮೆಂಟ್‌ನಲ್ಲಿ ಮೂರು ಪಂದ್ಯಗಳನ್ನು ಆಡಿರುವ ಶಂಕರ್ ಕೇವಲ 58 ರನ್ ಗಳಿಸಿದ್ದಾರೆ.

 ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹೆಬ್ಬೆರಳ ಮೂಳೆ ಬಿರುಕುಬಿಟ್ಟ ಕಾರಣ ಟೂರ್ನಿಯಿಂದಲೇ ಹೊರಗುಳಿದಿರುವ ಭಾರತದ ಓಪನರ್ ಶಿಖರ್ ಧವನ್ ಬದಲಿಗೆ ಪಂತ್ ಟೀಮ್ ಇಂಡಿಯಾವನ್ನು ಸೇರ್ಪಡೆಗೊಂಡಿದ್ದರು. ವಿಶ್ವಕಪ್‌ನ 15 ಸದಸ್ಯರ ತಂಡದಲ್ಲಿ ಆಯ್ಕೆಯಾಗಿದ್ದ ದಿನೇಶ್ ಕಾರ್ತಿಕ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ ಪಂತ್ ವಿಶ್ವಕಪ್‌ನಲ್ಲಿ ಆಡುವ ಅಪೂರ್ವ ಅವಕಾಶ ಪಡೆದರು.

 ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, 21ರ ಹರೆಯದ ಪಂತ್‌ರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್ ಹಾಗೂ ಕೇವಿನ್ ಪೀಟರ್ಸನ್ ಸ್ಫೋಟಕ ಬ್ಯಾಟ್ಸ್‌ಮನ್ ತಂಡಕ್ಕೆ ಸೇರಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಪಂತ್ ಕೇವಲ 5 ಏಕದಿನ ಪಂದ್ಯಗಳನ್ನು ಆಡಿದ್ದು, 130ರ ಸ್ಟ್ರೈಕ್‌ರೇಟ್‌ನಲ್ಲಿ 93 ರನ್ ಗಳಸಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 16 ಪಂದ್ಯಗಳಲ್ಲಿ 488 ರನ್ ಗಳಿಸಿ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News