ಬೈಕ್ ಕದ್ದ ಆರೋಪದಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ: ಭಾರೀ ಪ್ರತಿಭಟನೆ

Update: 2019-07-01 17:25 GMT

ಮಲ್ಡಾ (ಪಶ್ಚಿಮಬಂಗಾಳ), ಜು. 1: ಬೈಕ್ ಕದ್ದ ಆರೋಪದಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಯಾದ ವ್ಯಕ್ತಿಯ ಮೃತದೇಹ ಕೋಲ್ಕತ್ತಾ ಆಸ್ಪತ್ರೆಯಿಂದ ಮಲ್ಡಾಕ್ಕೆ ತಲುಪುತ್ತಿದ್ಧಂತೆ ಪ್ರತಿಭಟನೆ ಭುಗಿಲೆದ್ದಿದೆ. ಗುಂಪಿನಿಂದ ಥಳಿತಕ್ಕೊಳಗಾಗಿ 20ರ ಹರೆಯದ ಸನಾವುಲ್ ಶೇಖ್ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಲ್ಡಾ ಪೊಲೀಸ್ ಅಧೀಕ್ಷಕ ಅಲೋಕೆ ರಾಜೋರಿಯಾ ತಿಳಿಸಿದ್ದಾರೆ.

ಬೈಕ್ ಕದ್ದಿರುವುದು ಪತ್ತೆಯಾದ ಬಳಿಕ ಬೈಷ್ಣಬಂಗಾರ್‌ನಲ್ಲಿ ಬುಧವಾರ ಗುಂಪೊಂದು ಶೇಖ್‌ಗೆ ಹಲ್ಲೆ ನಡೆಸಿತ್ತು ಎಂದು ಅವರು ಹೇಳಿದ್ದಾರೆ. ಈ ಘಟನೆ ಬಗ್ಗೆ ವೈರಲ್ ಆದ ವೀಡಿಯೊದ ಆಧಾರದಲ್ಲಿ ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗುಂಪಿನಿಂದ ಥಳಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಶೇಖ್ ‌ರನ್ನು ಆರಂಭದಲ್ಲಿ ಬೇದರಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅವರು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಶೇಖ್ ‌ರನ್ನು ವರ್ಗಾಯಿಸಿದ್ದರು. ಆದರೆ, ಶನಿವಾರ ಶೇಖ್ ಮೃತಪಟ್ಟರು.

 ಈ ಘಟನೆಯನ್ನು ಕೋಮುವಾದಿ ಆಯಾಮದಿಂದ ಪರಿಗಣಿಸಬಾರದು. ಆತ ರೌಡಿ ಶೀಟರ್. ಈ ಹಿಂದೆ ಕಳವು ಆರೋಪದ ಹಿನ್ನೆಲೆಯಲ್ಲಿ ಆತ ಬಂಧನಕ್ಕೊಳಗಾಗಿದ್ದ ಎಂದು ಮಾಲ್ಡಾ ಜಿಲ್ಲಾ ಪರಿಷದ್‌ನ ಹಿರಿಯ ಪದಾಧಿಕಾರಿ ಚಂದನ್ ಸರ್ಕಾರ್ ತಿಳಿಸಿದ್ದಾರೆ. ಆತನ ಪತ್ನಿ ಇಂದು ನಮ್ಮನ್ನು ಭೇಟಿಯಾಗಿದ್ದಾರೆ. ಮಾನವೀಯ ನೆಲೆಯಲ್ಲಿ ನಾವು ಅವರಿಗೆ ನೆರವು ನೀಡಲು ಪ್ರಯತ್ನಿಸುತ್ತೇವೆ. ಶೇಖ್‌ನ ತಾಯಿಯ ದೂರಿನ ಹಿನ್ನೆಲೆಯಲ್ಲಿ ನಾವು ತನಿಖೆ ಆರಂಭಿಸಿದ್ದೇವೆ ಎಂದು ಅಲೋಕೆ ರಾಜೋರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News