ಟ್ರಂಪ್, ಕಿಮ್ ಭೇಟಿ ಐತಿಹಾಸಿಕ: ಉತ್ತರ ಕೊರಿಯ

Update: 2019-07-01 17:43 GMT

ಸಿಯೋಲ್ (ದಕ್ಷಿಣ ಕೊರಿಯ), ಜು. 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ರವಿವಾರ ನಡೆದ ಭೇಟಿ ‘ಐತಿಹಾಸಿಕ’ ಮತ್ತು ‘ಅದ್ಭುತ’ ಎಂಬುದಾಗಿ ಉತ್ತರ ಕೊರಿಯ ಸೋಮವಾರ ಬಣ್ಣಿಸಿದೆ.

ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣು ನಿಶ್ಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಮುನ್ನಡೆ ಸಾಧಿಸುವುದಕ್ಕಾಗಿ ಮಾತುಕತೆಗಳನ್ನು ಪುನರಾರಂಭಿಸಲು ಉಭಯ ನಾಯಕರು ಒಪ್ಪಿದ್ದಾರೆ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ಹೇಳಿದೆ.

ಉಭಯ ಕೊರಿಯಗಳ ನಡುವಿನ ಗಡಿಯಲ್ಲಿರುವ ಸೇನಾರಹಿತ ವಲಯದಲ್ಲಿ ಉತ್ತರ ಕೊರಿಯ ನಾಯಕನನ್ನು ಭೇಟಿಯಾಗುವ ಇಂಗಿತವನ್ನು ಟ್ರಂಪ್ ಶನಿವಾರ ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದರು. ಇದಾದ ಒಂದು ದಿನದ ಬಳಿಕ ಈ ಬಹು ಮಹತ್ವದ ಭೇಟಿ ನಡೆದೇ ಹೋಯಿತು.

ಗಡಿಯಲ್ಲಿ ಕಿಮ್‌ರನ್ನು ಭೇಟಿಯಾದ ಬಳಿಕ, ಟ್ರಂಪ್ ಉತ್ತರ ಕೊರಿಯದ ಜಮೀನಿನಲ್ಲಿ ಹಲವು ಹೆಜ್ಜೆಗಳನ್ನು ನಡೆದರು. ಆ ಮೂಲಕ ಉತ್ತರ ಕೊರಿಯದ ನೆಲದ ಮೇಲೆ ಕಾಲಿಟ್ಟ ಮೊದಲ ಅಮೆರಿಕ ಅಧ್ಯಕ್ಷರಾದರು.

ಭೇಟಿ ಪ್ರಚಾರ ತಂತ್ರ: ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ರನ್ನು ಕೊರಿಯದ ಸೇನಾರಹಿತ ವಲಯದಲ್ಲಿ ಭೇಟಿಯಾಗಿರುವುದನ್ನು ಅಮೆರಿಕದ 2020ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳು ರವಿವಾರ ಟೀಕಿಸಿದ್ದಾರೆ.

ಈ ಇಬ್ಬರು ನಾಯಕರ ಭೇಟಿಯಿಂದ ಯಾವುದೇ ಪರಿಣಾಮವಾಗಿಲ್ಲ ಹಾಗೂ ಅದು ನಿರ್ದಯಿ ಸರ್ವಾಧಿಕಾರಿಯನ್ನು ವೈಭವೀಕರಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಇದೊಂದು ಪ್ರಚಾರ ತಂತ್ರ ಎಂದು ಅವರು ಬಣ್ಣಿಸಿದ್ದಾರೆ.

ಕಿಮ್ ಸೇರಿದಂತೆ ಅಮೆರಿಕದ ವಿರೋಧಿಗಳೊಂದಿಗೆ ಮಾತುಕತೆ ನಡೆಸುವುದರಲ್ಲಿ ತಪ್ಪಿಲ್ಲ, ಆದರೆ, ಈ ಮಾತುಕತೆಯು ವ್ಯಾಪಕ ಸಿದ್ಧತೆಗಳು ಹಾಗೂ ಪರಮಾಣು ಅಸ್ತ್ರಗಳ ವಿಷಯದಲ್ಲಿ ಉತ್ತರ ಕೊರಿಯ ಸಾಕಷ್ಟು ಪ್ರಗತಿ ಸಾಧಿಸಿದ ಬಳಿಕ ನಡೆಯಬೇಕಾಗಿತ್ತು ಎಂಬುದಾಗಿ ಸೆನೆಟರ್ ಎಲಿಝಬೆತ್ ವಾರನ್, ಸೆನೆಟರ್ ಬರ್ನೀ ಸ್ಯಾಂಡರ್ಸ್ ಮತ್ತು ಕಮಲಾ ಹ್ಯಾರಿಸ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳು ಅಭಿಪ್ರಾಯಪಟ್ಟಿದ್ದಾರೆ.

ಭೇಟಿಗೆ ಪೋಪ್ ಫ್ರಾನ್ಸಿಸ್ ಶ್ಲಾಘನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ರವಿವಾರ ನಡೆದ ಭೇಟಿಯನ್ನು ಪೋಪ್ ಫ್ರಾನ್ಸಿಸ್ ಶ್ಲಾಘಿಸಿದ್ದಾರೆ ಹಾಗೂ ಇದು ಶಾಂತಿಯತ್ತ ಎಲ್ಲರನ್ನು ಒಯ್ಯುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

‘‘ಕಳೆದ ಕೆಲವು ಗಂಟೆಗಳ ಅವಧಿಯಲ್ಲಿ ನಾವು ಕೊರಿಯದಲ್ಲಿ ಜನರು ಪರಸ್ಪರ ಭೇಟಿಯಾಗುವುದನ್ನು ನೋಡಿದ್ದೇವೆ. ಇದರಲ್ಲಿ ಭಾಗಿಯಾದವರನ್ನು ನಾನು ಅಭಿನಂದಿಸುತ್ತೇನೆ. ಇಂಥ ಮಹತ್ವದ ಕ್ರಮವು ಶಾಂತಿಯತ್ತ ನಾವು ಒಂದು ಹೆಜ್ಜೆ ಮುಂದೆ ಇಡುವಂತೆ ಮಾಡುತ್ತದೆ. ಇದು ಕೊರಿಯ ಪರ್ಯಾಯ ದ್ವೀಪಕ್ಕೆ ಮಾತ್ರ ಸೀಮಿತವಲ್ಲ, ಇಡೀ ಜಗತ್ತಿಗೆ ಇದು ಸಂತೋಷದ ವಿಷಯ’’ ಎಂಬುದಾಗಿ ರವಿವಾರ ಸೇಂಟ್ ಪೀಟರ್ಸ್ ಚೌಕದಲ್ಲಿ ಪ್ರಾರ್ಥನೆಗಾಗಿ ಸೇರಿದ ಸಾವಿರಾರು ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News