ಭಾರತದ ಸೋಲಿನೊಂದಿಗೆ ಪಾಕ್ ಸೆಮಿ ಫೈನಲ್ ವಿಶ್ವಾಸ ಕ್ಷೀಣ

Update: 2019-07-02 03:24 GMT

ಹೊಸದಿಲ್ಲಿ, ಜು.1: ಭಾರತ ತಂಡ ಇಂಗ್ಲೆಂಡ್ ವಿರುದ್ಧ ರವಿವಾರ 31 ರನ್‌ಗಳಿಂದ ಸೋಲುಂಡಿದೆ. ವಿರಾಟ್ ಕೊಹ್ಲಿ ಬಳಗ ಟೂರ್ನಿಯಲ್ಲಿ ಆಡಿದ 7ನೇ ಪಂದ್ಯದಲ್ಲಿ ಮೊದಲ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋತಿದ್ದರೂ ಒಟ್ಟು 11 ಅಂಕ ಹೊಂದಿರುವ ಕೊಹ್ಲಿ ಪಡೆಯ ಸೆಮಿ ಫೈನಲ್ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಭಾರತದ ಸೋಲಿನಿಂದ ಪಾಕಿಸ್ತಾನದ ಸೆಮಿ ಫೈನಲ್ ವಿಶ್ವಾಸ ಮಾತ್ರ ಕ್ಷೀಣಿಸಿದೆ. ಮಾತ್ರವಲ್ಲ ಶ್ರೀಲಂಕಾ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರಗುಳಿದಿದೆ.

 ಸೆಮಿ ಫೈನಲ್ ಸ್ಪರ್ಧೆ ಹಾಗೂ ಅದಕ್ಕೆ ಸಂಬಂಧಿಸಿದ ಸನ್ನಿವೇಶ ಅಂಕಪಟ್ಟಿಯ ಪ್ರಕಾರ ಈಗಲೂ ಸಂಕೀರ್ಣವಾಗಿದೆ. ಭಾರತ, ನ್ಯೂಝಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಉಳಿದ 3 ಸೆಮಿ ಫೈನಲ್ ಸ್ಥಾನಗಳಿಗಾಗಿ ಸ್ಪರ್ಧೆಯಲ್ಲಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಈಗಾಗಲೇ ಅಂತಿಮ-4ರ ಘಟ್ಟದಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.

ಭಾರತ ವಿರುದ್ದ ಇಂಗ್ಲೆಂಡ್ ಜಯ ಸಾಧಿಸಿದ ಬಳಿಕ ಉದ್ಭವಿಸಿರುವ ಸೆಮಿ ಫೈನಲ್ ಸಮೀಕರಣ ಹೀಗಿದೆ...

►ಭಾರತದ ಸೆಮಿ ಫೈನಲ್ ತಲುಪುವ ಅವಕಾಶ ಉಜ್ವಲವಾಗಿದೆ. ಈಗ 11 ಅಂಕ ಪಡೆದಿರುವ ಭಾರತ ಉಳಿದೆರಡು ಪಂದ್ಯಗಳಲ್ಲಿ(ಜು.2ಕ್ಕೆ ಬಾಂಗ್ಲಾ, ಜು.6ಕ್ಕೆ ಶ್ರೀಲಂಕಾ)ಒಂದರಲ್ಲಿ ಜಯ ಸಾಧಿಸಿದರೆ ಸೆಮಿ ಫೈನಲ್ ಖಚಿತವಾಗಲಿದೆ.

►ನ್ಯೂಝಿಲ್ಯಾಂಡ್ ಕೂಡ 11 ಅಂಕ ಹೊಂದಿದೆ. ಇನ್ನೊಂದು ಪಂದ್ಯ ಆಡಲು ಬಾಕಿ ಉಳಿದಿದೆ. ಇಂಗ್ಲೆಂಡ್ ವಿರುದ್ಧ ಜು.3ಕ್ಕೆ ನಡೆಯುವ ಪಂದ್ಯದಲ್ಲಿ ಜಯ ಸಾಧಿಸಿದರೆ ಸೆಮಿ ಫೈನಲ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ, ಇಂಗ್ಲೆಂಡ್ ಎದುರು ಸೋಲುಂಡರೂ ನೆಟ್‌ರನ್‌ರೇಟ್ ಆಧಾರದಲ್ಲಿ ಮುಂದಿನ ಸುತ್ತಿಗೇರಲು ಸಾಧ್ಯವಿದೆ.

►ಇಂಗ್ಲೆಂಡ್(10 ಅಂಕ)ನ್ಯೂಝಿಲ್ಯಾಂಡ್ ವಿರುದ್ಧ ಜಯ ಸಾಧಿಸಿದರೆ ಸೆಮಿ ಫೈನಲ್‌ಗೆ ಪ್ರವೇಶಿಸುತ್ತದೆ. ಒಂದೊಮ್ಮೆ ಕಿವೀಸ್ ವಿರುದ್ಧ ಸೋತರೆ ಆಂಗ್ಲರ ಸೆಮಿ ಫೈನಲ್‌ಹಾದಿ ಸಂಪೂರ್ಣ ಬಂದ್ ಆಗುವುದಿಲ್ಲ. ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಮಣಿಸಬೇಕು. ಆದರೆ ಅದು ಭಾರತ ವಿರುದ್ಧ ಸೋತರೆ ಇಂಗ್ಲೆಂಡ್ ತಂಡ ಮುಂದಿನ ಸುತ್ತಿಗೆ ತಲುಪಲು ಸಾಧ್ಯವಿದೆ.

►ಪಾಕಿಸ್ತಾನ(9 ಅಂಕ)ತಂಡ ಬಾಂಗ್ಲಾದೇಶ ವಿರುದ್ಧ ದೊಡ್ಡ ಅಂತರದಿಂದ ಜಯ ಸಾಧಿಸಿದರೆ ಹಾಗೂ ಇಂಗ್ಲೆಂಡ್ ತಂಡ ನ್ಯೂಝಿಲ್ಯಾಂಡ್‌ಗೆ ಶರಣಾದರೆ ಪಾಕ್‌ಗೆ ಸೆಮಿ ಫೈನಲ್ ಬಾಗಿಲು ತೆರೆಯಲಿದೆ.

►ಬಾಂಗ್ಲಾದೇಶ(7ಅಂಕ) ಸೆಮಿ ಫೈನಲ್‌ಗೆ ತಲುಪಬೇಕಾದರೆ ಭಾರತ ಹಾಗೂ ಪಾಕಿಸ್ತಾನವನ್ನು ಸೋಲಿಸಬೇಕು ಹಾಗೂ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್‌ನ್ನು ಮಣಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News