ಚೀನಾ ವ್ಯಾಪಾರ ಮಾತುಕತೆ ಈಗಾಗಲೇ ಪುನರಾರಂಭ: ಟ್ರಂಪ್

Update: 2019-07-02 18:35 GMT

ವಾಶಿಂಗ್ಟನ್, ಜು. 2: ವಾರಾಂತ್ಯದಲ್ಲಿ ಜಪಾನ್‌ ನ ಒಸಾಕದಲ್ಲಿ ನಡೆದ ಜಿ20 ದೇಶಗಳ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸುವುದರೊಂದಿಗೆ ಚೀನಾ ಜೊತೆಗಿನ ವ್ಯಾಪಾರ ಮಾತುಕತೆ ಪುನರಾರಂಭಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಒಂದು ವರ್ಷದಿಂದ ನಡೆಯುತ್ತಿರುವ ವ್ಯಾಪಾರ ಸಮರವನ್ನು ನಿಲ್ಲಿಸುವ ಉದ್ದೇಶದ ಮಾತುಕತೆಯ ಮುಂದುವರಿದ ಭಾಗವಾಗಿ ಟ್ರಂಪ್ ಮತ್ತು ಜಿನ್‌ಪಿಂಗ್ ಶನಿವಾರ ಮಾತುಕತೆ ನಡೆಸಿದರು. ಚೀನಾದ ಸರಕುಗಳ ಮೇಲೆ ಇನ್ನೂ ಹೆಚ್ಚಿನ ಸುಂಕ ವಿಧಿಸುವ ಪ್ರಸ್ತಾವವನ್ನು ತಡೆಹಿಡಿಯುವುದಾಗಿ ಟ್ರಂಪ್ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಚೀನಾದ ತಂತ್ರಜ್ಞಾನ ದೈತ್ಯ ವಾವೇಗೆ ಅಮೆರಿಕದ ತಂತ್ರಜ್ಞಾನ ರಫ್ತಿನ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳ ಪೈಕಿ ಕೆಲವನ್ನು ರದ್ದುಗೊಳಿಸುವುದಾಗಿಯೂ ಟ್ರಂಪ್ ಭರವಸೆ ನೀಡಿದ್ದಾರೆ.

ಚೀನಾದೊಂದಿಗಿನ ವ್ಯಾಪಾರ ಮಾತುಕತೆ ಪುನರಾರಂಭಗೊಂಡಿದೆಯೇ ಎಂಬುದಾಗಿ ಶ್ವೇತಭವನದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಅದು ಈಗಾಗಲೇ ಆರಂಭಗೊಂಡಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News