ಸಕಾಲಿಕ ಕ್ರಮ ಕೈಗೊಳ್ಳಲು ಆರ್ ಬಿಐ ವಿಫಲವಾಗಿತ್ತು: ಮಾಜಿ ಗವರ್ನರ್ ಊರ್ಜಿತ್ ಪಟೇಲ್

Update: 2019-07-04 09:28 GMT

ಹೊಸದಿಲ್ಲಿ, ಜು.4: ಈಗ ಎದುರಾಗಿರುವ ಅನುತ್ಪಾದಕ ಸಾಲದ ಸಮಸ್ಯೆಗೆ 2014ರ ತನಕ ಬ್ಯಾಂಕುಗಳು, ಸರಕಾರ ಹಾಗೂ  ನಿಯಂತ್ರಕ ಸಂಸ್ಥೆಯ ವೈಫಲ್ಯವೇ ಕಾರಣ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ಸರಕಾರದ ಜತೆ ತೀವ್ರ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ಕಳೆದ ವರ್ಷದ ಡಿಸೆಂಬರ್ 10ರಂದು ರಾಜೀನಾಮೆ ನೀಡಿದ ನಂತರ ಮೊದಲ ಬಾರಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿರುವ ಪಟೇಲ್, “ಬ್ಯಾಂಕ್ ಗಳು ಮಿತಿ ಮೀರಿ ಸಾಲ ನೀಡಿದ್ದವು. ಜತೆಗೆ ಸರಕಾರ ತನ್ನ ಪಾತ್ರವನ್ನು ಸಂಪೂರ್ಣವಾಗಿ ನಿಭಾಯಿಸಿರಲಿಲ್ಲ. ನಿಯಂತ್ರಕ ಸಂಸ್ಥೆ ಆರ್ ಬಿಐ ಬಹಳಷ್ಟು ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕಿತ್ತು,'' ಎಂದಿದ್ದಾರೆ.

ಜೂನ್ 3ರಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಾ ಮುಖ್ಯವಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಹೆಚ್ಚಾಗಿರುವ ಎನ್ ಪಿಎ ಹಾಗೂ ಕ್ಯಾಪಿಟಲ್ ಬಫರ್ ಗಳನ್ನು ಸದ್ಯ `ಉತ್ಪ್ರೇಕ್ಷಿಸಿರುವುದರಿಂದ’ ಅದು ಈಗಿನ ಬೃಹತ್ ಸಮಸ್ಯೆಯನ್ನು ನಿಭಾಯಿಸಲು ಸಾಕಾಗುವುದಿಲ್ಲ ಎಂದಿದ್ದಾರೆ.

“ಶಾರ್ಟ್ ಕಟ್ ಬಳಕೆ ಹಾಗೂ ಸಮಸ್ಯೆಯನ್ನು ಚಾಪೆಯಡಿ ತೂರಿಸುವುದು ಕೆಲಸ ಮಾಡದು, ಬದಲು ಸಮಸ್ಯೆ ಪರಿಹಾರವನ್ನು  ಇನ್ನಷ್ಟು ವಿಳಂಬಿಸುವುದು'' ಎಂದರು.

ದಿವಾಳಿತನಕ್ಕೆ ಸಂಬಂಧಿಸಿದ ನಿಯಮವನ್ನು ಜಾರಿಗೊಳಿಸುವ ರೀತಿಯ ಬಗ್ಗೆಯೂ ಪಟೇಲ್ ತಮ್ಮ ಅಸಮಾಧಾನ ತೋಡಿಕೊಂಡಿದ್ದು, “ಕಳವಳ ಹುಟ್ಟಿಸುವಂತಹ ವಿನಾಯಿತಿಗಳ ಸಂಖ್ಯೆಯಿದೆ ಹಾಗೂ ಪ್ರಮುಖ ಪ್ರಕರಣಗಳನ್ನು ನಿಗದಿತ 350 ದಿನಗಳ ಅವಧಿಯಾಚೆಗೆ ಎಳೆದು ವಿಳಂಬಿಸಲಾಗುತ್ತಿದೆ'' ಎಂದರು.

ಸಾರ್ವಜನಿಕ ರಂಗದ ಬ್ಯಾಂಕುಗಳ ಗಳಿಕೆಯನ್ನು ಗಮನಿಸಿದಾಗ ಅವುಗಳ ನಿರ್ವಹಣೇತರ ಖರ್ಚುವೆಚ್ಚಗಳು ಖಾಸಗಿ ಬ್ಯಾಂಕುಗಳಿಗಿಂತ ಅಧಿಕವಾಗಿದೆ ಎಂದೂ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News