ಏಕಕಾಲದಲ್ಲಿ ಚುನಾವಣೆಗಳು ಒಕ್ಕೂಟ ವ್ಯವಸ್ಥೆಯ ಮರಣಗಂಟೆ

Update: 2019-07-04 18:38 GMT

ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲು ಇತ್ತೀಚೆಗೆ ಪ್ರಧಾನಿಯವರು ಸರ್ವಪಕ್ಷ ಸಭೆಯೊಂದನ್ನು ಕರೆದಿದ್ದರು. ಈ ಹಿನ್ನೆಲೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಸುತ್ತ ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ಈ ವಿಚಾರದ ಬಗ್ಗೆ ಇಂತಹ ಒಂದು ಹೆಜ್ಜೆ ಇಟ್ಟಲ್ಲಿ ಅದರಿಂದಾಗಬಹುದಾದ ಹಾನಿಯ ಬಗ್ಗೆ ನಾವು ಚರ್ಚಿಸುವುದು ಅನಿವಾರ್ಯವಾಗಿದೆ.

ಪ್ರಾತಿನಿಧಿಕ ಪ್ರಜಾಪ್ರಭುತ್ವ ಅಪರಿಪೂರ್ಣ; ಚುನಾವಣೆಗಳ ಮೂಲಕ ಸಾರ್ವಜನಿಕರ ಭಾಗವಹಿಸುವಿಕೆ ಈ ಅಪರಿಪೂರ್ಣತೆಗಳನ್ನು, ದೋಷಗಳನ್ನು ಸರಿಪಡಿಸಲು ಸಂವಹನದ ಒಂದು ವ್ಯವಸ್ಥೆಯನ್ನು ಒದಗಿಸುತ್ತದೆ. ಆ ಮೂಲಕ ಈಗ ಇದು ಸಾಮಾಜಿಕ ವಿವಿಧತೆಗೆ ಅತ್ಯವಶ್ಯಕವಾದ ರಾಜಕೀಯ ವಿವಿಧತೆಯನ್ನು ನೀಡುತ್ತದೆ. ಚುನಾವಣೆಗಳ ಐತಿಹಾಸಿಕ ಮತ್ತು ಸಾಂವಿಧಾನಿಕ ಕಥಾನಕಗಳ ಒಂದು ವಿಶ್ಲೇಷಣೆ ನಡೆಸಿದಾಗ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಪ್ರಸ್ತಾಪ ಅಪ್ರಯೋಗಿಕ. ಅದು ಕಾರ್ಯಸಾಧ್ಯವಲ್ಲದ, ಮತ್ತು ಪ್ರಜಾಪ್ರಭುತ್ವಕ್ಕೆ ಬೇಕಾದ ಸಮತೋಲನ ಕಳೆದು ಹೋಗುವಂತಹ ಒಂದು ಸ್ಥಿತಿಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ.
1951-52ರಲ್ಲಿ ಲೋಕಸಭೆ ಮತ್ತು ರಾಜ್ಯಗಳ ಅಸೆಂಬ್ಲಿಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದು, 1967ರ ವರೆಗೆ ಮುಂದಿನ ಮೂರು ಚುನಾವಣೆಗಳು ಅದೇ ಕ್ರಮದಲ್ಲಿ ನಡೆದಿದ್ದವು. 1967ರ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯಿಂದಾಗಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಯಿತು. ಅದೇನಿದ್ದರೂ 1967ರ ವರೆಗೆ ಇದ್ದ ಚುನಾವಣಾ ವ್ಯವಸ್ಥೆ ಒಂದು ಯೋಜಿತವಾದ ಚುನಾವಣಾ ಪ್ರಕ್ರಿಯೆಯಾಗಿರಲಿಲ್ಲ. ಅಧಿಕಾರ ಒಂದೇ ಪಕ್ಷದಲ್ಲಿ ಕೇಂದ್ರಿತವಾಗಿದ್ದದ್ದೇ ಅದಕ್ಕೆ ಕಾರಣವಾಗಿತ್ತು.
ಸಂವಿಧಾನದ 83(2)ನೇ ಪರಿಚ್ಛೇದದ ಪ್ರಕಾರ ಲೋಕಸಭೆ ಅದರ ಮೊದಲ ಸಭೆಯ ದಿನಾಂಕದಿಂದ ಐದು ವರ್ಷಗಳವರೆಗೆ ಮುಂದುವರಿಯಬೇಕು. ಆದರೆ ಸರಕಾರ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕಾದರೆ ರಾಜ್ಯ ಅಸೆಂಬ್ಲಿಗಳ ಅವಧಿಯನ್ನು ಒಂದೋ ಮೊಟಕುಗೊಳಿಸಬೇಕಾಗುತ್ತದೆ ಅಥವಾ ವಿಸ್ತರಿಸಬೇಕಾಗುತ್ತದೆ. ಸಂವಿಧಾನದ ಈಗಿನ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಸಂವಿಧಾನದ 85(2)(ಬಿ) ನಿಯಮ ಪ್ರಕಾರ ರಾಷ್ಟ್ರಪತಿಗಳಿಗೆ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರವಿದೆ. ಆದರೆ ಇದನ್ನು ಮಾಡಲು ಸಂವಿಧಾನಕ್ಕೆ ಹಲವು ತಿದ್ದುಪಡಿಗಳಾಗಬೇಕಾಗುತ್ತದೆ. ಈ ತಿದ್ದುಪಡಿಗಳು ರಾಜ್ಯ ಮತ್ತು ಕೇಂದ್ರದ ನಡುವಿನ ಅಧಿಕಾರ ಸಮತೋಲನವನ್ನು ಬುಡಮೇಲು ಮಾಡಬಲ್ಲವು.
       
ಒಕ್ಕೂಟದ ಮೇಲೆ ಆಗುವ ಪರಿಣಾಮಗಳು:
ಏಕಕಾಲದಲ್ಲಿ ಚುನಾವಣೆ ಎಂಬ ವಿಚಾರ ಸಂಸದೀಯ ವ್ಯವಸ್ಥೆಯನ್ನೇ ಅಮುಖ್ಯಗೊಳಿಸಿಬಿಡುತ್ತದೆ. ಸಂಸದೀಯ ವ್ಯವಸ್ಥೆಯ ಒಂದು ಮುಖ್ಯ ಲಕ್ಷಣವೆಂದರೆ ಅದು ಕಾರ್ಯಾಂಗಕ್ಕೆ ಶಾಸಕಾಂಗವನ್ನು ವಿಸರ್ಜಿಸುವ ಅಧಿಕಾರ ನೀಡುತ್ತದೆ. ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರ ಮತ್ತು ರಾಜ್ಯಗಳ ಶಾಸಕಾಂಗಗಳ ಅವಧಿಯನ್ನು ನಿಗದಿಗೊಳಿಸಿದರೆ ಈ ಅಧಿಕಾರ ಅಂತ್ಯಗೊಳ್ಳುತ್ತದೆ. ಏಕಕಾಲದಲ್ಲಿ ಚುನಾವಣೆ ಎಂಬುದು ಸಂವಿಧಾನದ 356ನೇ ವಿಧಿಯನ್ನು ಒಂದು ಅಪವಾದಕ್ಕಿಂತ ಹೆಚ್ಚಾಗಿ ಒಂದು ನಿಯಮವಾಗಿ ಮಾಡುತ್ತದೆ. ಇದು ನಮ್ಮ ಸಂವಿಧಾನ ನಿರ್ಮಾತೃಗಳ ಆಶಯಕ್ಕೆ ವಿರುದ್ಧವಾಗಲಿದೆ.
ಏಕಕಾಲದಲ್ಲಿ ಚುನಾವಣೆ ರಾಷ್ಟ್ರಪತಿಗಳಿಗೆ ಅಭೂತಪೂರ್ವ ಅಧಿಕಾರ ನೀಡುತ್ತದೆ. ರಾಷ್ಟ್ರಪತಿಗಳು ಪ್ರಧಾನಿ ಹಾಗೂ ಅವರ ಸಚಿವ ಸಂಪುಟದ ಸಲಹೆಯಂತೆ ಕಾರ್ಯವೆಸಗುವವರು. ಈ ವ್ಯವಸ್ಥೆ ರಾಷ್ಟ್ರೀಯ ಪಕ್ಷಗಳಿಗೆ ಪಕ್ಷಪಾತ ತೋರಿ, ಪ್ರಾದೇಶಿಕ ಪಕ್ಷಗಳನ್ನು ಬದಿಗೆ ತಳ್ಳುತ್ತದೆ.
ರಾಷ್ಟ್ರಪತಿ ಆಳ್ವಿಕೆಯಲ್ಲಿ ಒಂದು ರಾಜ್ಯ ಸರಕಾರವು ಅಕ್ಷರಶಃ ಕೇಂದ್ರ ಸರಕಾರದ ನಿರ್ದೇಶನ ಹಾಗೂ ನಿಯಂತ್ರಣದಲ್ಲಿರುತ್ತದೆ. ಕಾರ್ಯಾಂಗ ಅಧಿಕಾರವನ್ನು ರಾಜ್ಯಪಾಲರಿಗೆ ವಹಿಸಲಾಗುತ್ತದೆ. ರಾಜ್ಯಪಾಲರು ಅವರ ಸಲಹೆಗಾರರ ನೆರವು ಹಾಗೂ ಸಲಹೆಗಳಂತೆ ಕಾರ್ಯವೆಸಗುತ್ತಾರೆ. ಈ ಸಲಹೆಗಾರರು ಹೆಚ್ಚಾಗಿ (ಬ್ಯೂರಾಕ್ರಟ್ಸ್) ಸರಕಾರಿ ಅಧಿಕಾರಿಗಳಾಗಿರುತ್ತಾರೆ. ಇದು ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರುವುದಲ್ಲದೆ ಬೇರೇನು ಅಲ್ಲ. ಯಾಕೆಂದರೆ ರಾಜ್ಯಪಾಲರಾಗಲಿ, ಅವರ ಸಲಹೆಗಾರರಾಗಲಿ ಜನರಿಂದ ಚುನಾಯಿತರಾದವರಲ್ಲ, ಹೀಗಾಗಿ ಅವರು ಜನತೆಯ ಚಿತ್ತದ ತೀರ್ಮಾನದ ಪ್ರತಿನಿಧಿಗಳಲ್ಲ.
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ. ಪ್ರಜಾಪ್ರಭುತ್ವವೆಂದರೆ ಜನರಿಗೆ ಉತ್ತರದಾಯಿತ್ವವನ್ನು ಖಾತರಿಗೊಳಿಸುವುದು. ಏಕಕಾಲದಲ್ಲಿ ಚುನಾವಣೆ ಆಡಳಿತದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಕುಂಠಿತಗೊಳಿಸುತ್ತದೆ.
 ಏಕಕಾಲದಲ್ಲಿ ಚುನಾವಣೆಗಳು ನಡೆದಾಗ ಚರ್ಚೆಯ ಹೆಚ್ಚಿನ ವಿಷಯಗಳು ರಾಷ್ಟ್ರಮಟ್ಟದ ಸಮಸ್ಯೆಗಳಾಗಿರುತ್ತವೆ. ಹಾಗಾಗಿ ಚುನಾವಣೆಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಲಾಭವಾಗುತ್ತದೆಯೇ ಹೊರತು ಪ್ರಾದೇಶಿಕ ಪಕ್ಷಗಳಿಗಲ್ಲ. ಚುನಾವಣಾ ಪ್ರಚಾರಗಳಲ್ಲಿ ಸ್ಥಳೀಯ ಪ್ರಶ್ನೆಗಳು, ಸಮಸ್ಯೆಗಳು ಉಪೇಕ್ಷೆಗೊಳಗಾಗುತ್ತವೆ.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆದಲ್ಲಿ ಕೇಂದ್ರ ಸರಕಾರದ ಕಾರ್ಯವಿಧಾನದ ಮೇಲೆ ಜನರಿಗೆ ಒಂದು ರೀತಿಯ ಹಿಡಿತ ಮತ್ತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಅವಕಾಶ ಲಭಿಸುತ್ತದೆ.
ಆಳುವ ಪಕ್ಷಗಳಿಗೆ ತಮ್ಮ ಮನಸ್ಥಿತಿ (ಮೂಡ್)ಯನ್ನು ತಿಳಿಸಲು ಅವರಿಗೆ ಸಾಧ್ಯವಾಗುತ್ತದೆ.

ಐಡಿಎಫ್‌ಸಿ ನಡೆಸಿದ ಸಂಶೋಧನೆಯ ಪ್ರಕಾರ, ಏಕಕಾಲದಲ್ಲಿ ಚುನಾವಣೆಗಳು ನಡೆದಾಗ ಮತದಾರರಿಗೆ ರಾಷ್ಟ್ರೀಯ ಮತ್ತು ಸ್ಥಳೀಯ ಪ್ರಶ್ನೆಗಳ, ವಿಷಯಗಳ ಬಗ್ಗೆ ಗೊಂದಲ ಉಂಟಾಗುತ್ತದೆ. ಪರಿಣಾಮವಾಗಿ ಅವರು ಕೇಂದ್ರ ಮತ್ತು ರಾಜ್ಯ-ಎರಡರಲ್ಲೂ ಒಂದೇ ರಾಜಕೀಯ ಪಕ್ಷಕ್ಕೆ ಮತಹಾಕುವ ಸಾಧ್ಯತೆ ಶೇ. 77ರಷ್ಟು ಇರುತ್ತದೆ. ರಾಷ್ಟ್ರೀಯ ಚುನಾವಣೆಗಳು ನಡೆದ ಆರು ತಿಂಗಳುಗಳ ಬಳಿಕ ರಾಜ್ಯಗಳಲ್ಲಿ ಚುನಾವಣೆಗಳು ನಡೆದಲ್ಲಿ, ಇದು ಶೇ. 48ಕ್ಕೆ ಇಳಿಯುತ್ತದೆ. ಅಂದರೆ ರಾಷ್ಟ್ರೀಯ ಪಕ್ಷಗಳು ರಾಜ್ಯ ಹಾಗೂ ಲೋಕಸಭೆ-ಎರಡೂ ಚುನಾವಣೆಗಳನ್ನು ಗೆದ್ದು, ಸ್ಥಳೀಯ ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷಗಳು ಅಂಚಿಗೆ ಸರಿಸಲ್ಪಡುತ್ತವೆ. ಕೊನೆಯದಾಗಿ, ಏಕಕಾಲದಲ್ಲಿ ಚುನಾವಣೆಗಳು ನಡೆದಲ್ಲಿ ಚುನಾವಣಾ ಖರ್ಚು ಕಡಿಮೆಯಾಗುತ್ತದೆ ಎಂಬ ವಾದ. ಆದರೆ ಸಂವಿಧಾನ ನಿರ್ಮಾತೃಗಳು ಸಂವಿಧಾನದಲ್ಲಿ ‘‘ಏಕಕಾಲದಲ್ಲಿ ಚುನಾವಣೆಗಳು’’ ಎಂದು ಎಲ್ಲಿಯೂ ಹೇಳಿಲ್ಲ ಎಂಬುದನ್ನು ನಾವು ಮರೆಯಕೂಡದು. ಚುನಾವಣೆಗಳ ಹಣಕಾಸು ವೆಚ್ಚ ವನ್ನು ಸಹಿಸಿಕೊಳ್ಳುವುದು, ತಾಳಿಕೊಳ್ಳುವುದು ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಮೂಲಕ ಆಗುವ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ತತ್ವಗಳ ಅವನತಿಯನ್ನು ತಾಳಿಕೊಳ್ಳುವುದಕ್ಕಿಂತ ಹೆಚ್ಚು ಸುಲಭ.
(ಲೇಖಕರು ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದಾರೆ.)
ಕೃಪೆ: ಡೆಕ್ಕನ್ ಹೆರಾಲ್ಡ್

Writer - ಕುಮಾರ್ ಸತ್ಯಂ

contributor

Editor - ಕುಮಾರ್ ಸತ್ಯಂ

contributor

Similar News