ಸತತ 11ನೇ ಬಾರಿ ಮೂರನೇ ಸುತ್ತಿಗೆ ತಲುಪಿದ ಜೊಕೊವಿಕ್

Update: 2019-07-05 03:34 GMT

ಲಂಡನ್, ಜು.4: ನಾಲ್ಕು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸತತ 11ನೇ ಬಾರಿ ಮೂರನೇ ಸುತ್ತಿಗೆ ತಲುಪಿದ್ದಾರೆ.

ಇದೇ ವೇಳೆ, 15ರ ಹರೆಯದ ಬಾಲಕಿ ಕೊರಿ ಗೌಫ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಐತಿಹಾಸಿಕ ಚೊಚ್ಚಲ ಪಂದ್ಯದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಲು ಎದುರು ನೋಡುತ್ತಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೊಕೊವಿಕ್ ಅಮೆರಿಕದ ಡೆನಿಸ್ ಕುಡ್ಲಾ ಅವರನ್ನು 6-3, 6-2, 6-2 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಜೊಕೊವಿಕ್ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಲು ಹ್ಯೂಬರ್ಟ್ ಹುರ್ಕಾಝ್‌ರನ್ನು ಎದುರಿಸಲಿದ್ದಾರೆ. ಮೇನಲ್ಲಿ ನಡೆದ ಫ್ರೆಂಚ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಪೊಲೆಂಡ್‌ನ ಹುರ್ಕಾಝ್‌ರನ್ನು ಮಣಿಸಿದ್ದರು. ಕಳೆದ ವರ್ಷ ಫೈನಲ್‌ಗೆ ತಲುಪಿ ಗಮನ ಸೆಳೆದಿದ್ದ ದಕ್ಷಿಣ ಆಫ್ರಿಕದ 4ನೇ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್ ಸರ್ಬಿಯದ ಜಾಂಕೊ ಟಿಪ್‌ಸರೆವಿಕ್‌ರನ್ನು 6-4, 6-7(5/7), 6-1, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

ಕಳೆದ ಬುಧವಾರ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್‌ರನ್ನು ಮೊದಲ ಸುತ್ತಿನಲ್ಲಿ ಮಣಿಸಿ ಶಾಕ್ ನೀಡಿದ್ದ 15ರ ಬಾಲಕಿ ಕೊರಿ ಗೌಫ್ ಮುಂದಿನ ಸುತ್ತಿನಲ್ಲಿ 30ರ ಹರೆಯದ ಮಗ್ಡಾಲೆನಾ ರಿಬಾರಿಕೊವಾರನ್ನು ಎದುರಿಸಲಿದ್ದಾರೆ. ವಿಂಬಲ್ಡನ್ ಟೂರ್ನಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿಯಾಗಿರುವ ಗೌಫ್ ಈಗಷ್ಟೇ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News