ರೋಷನ್‌ ಬೇಗ್‌ರಿಂದ ಹಣ ವಸೂಲಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

Update: 2019-07-05 14:36 GMT

ಬೆಂಗಳೂರು ಜು.5 : ಐಎಂಎ ಹಗರಣದ ರೂವಾರಿ ಮನ್ಸೂರ್ ಖಾನ್ ಪ್ರಸ್ತಾಪಿಸಿರುವಂತೆ ಶಾಸಕ ರೋಷನ್ ಬೇಗ್‌ರಿಂದ 400 ಕೋಟಿ ರೂ.ಗಳನ್ನು ವಸೂಲಿ ಮಾಡಿ ಹೂಡಿಕೆದಾರರಿಗೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಎದುರು ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ರಾಜಧಾನಿಯಲ್ಲಿ ನಕಲಿ ಕಂಪನಿಗಳ ಹಾವಳಿ, ನಕಲಿ ಹಣಕಾಸು ಸಂಸ್ಥೆಗಳೂ, ಭೂ ಮಾಫಿಯಾ, ಲಾಟರಿ ಮಾಫಿಯಾ ಸಂಖ್ಯೆ ಅಧಿಕವಾಗುತ್ತಿದ್ದು, ಅಮಾಯಕ ಜನರನ್ನು ವಂಚಿಸುತ್ತಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಸ್.ರಘು, ನಕಲಿ ಸಂಸ್ಥೆಗಳ ಬೆನ್ನೆಲುಬಾಗಿ ರಾಜಕಾರಣಿಗಳೇ ನಿಂತಿರುವುದು ನಾಚಿಕೆಗೇಡಿನ ಸಂಗತಿ. ಐಎಂಎನಲ್ಲಿ ಹೂಡಿಕೆ ಮಾಡಿದ್ದವರಿಗೆ ಮೋಸ ಮಾಡಿ ಪರಾರಿಯಾದ ಬಳಿಕ ಐಎಂಎ ಮಾಲಕ ಬಿಡುಗಡೆ ಮಾಡಿದ ಆಡಿಯೋದಲ್ಲಿ ಶಾಸಕ ರೋಷನ್‌ ಬೇಗ್‌ಗೆ ಕೋಟ್ಯಂತರ ರೂ.ಗಳಷ್ಟು ಹಣ ನೀಡಲಾಗಿದೆ. ಅದನ್ನು ವಾಪಸ್ಸು ಪಡೆಯಲು ಹೋದರೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು ಎಂದರು.

ಅನಂತರ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಭಾರತಕ್ಕೆ ಬರಲು ಸಿದ್ಧನಿದ್ದೇನೆಂದು ಹೇಳಿದ್ದು, ಕಾರಣಾಂತರದಿಂದ ಬರಲಾಗಲಿಲ್ಲ ಎಂದಿದ್ದ ಅವರು ರೋಷನ್‌ ಬೇಗ್‌ಗೆ 400 ಕೋಟಿ ರೂ.ಗಳಷ್ಟು ಹಣ ನೀಡಿರುವುದನ್ನು ಮತ್ತೊಮ್ಮೆ ಹೇಳಿದ್ದರು. ಘಟನೆ ನಡೆದು ಇಷ್ಟು ದಿನಗಳಾದರೂ ರೋಷನ್‌ಬೇಗ್‌ರ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ ಹಾಗೂ ವಿಚಾರಣೆ ಮಾಡದೇ ನಿರ್ಲಕ್ಷಿಸಿರುವುದು ಸರಿಯಲ್ಲ. ಅವರ ಮೇಲೆ ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆಪಾದಿಸಿದರು.

ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಯಾವುದೇ ಆಡಿಯೋ ಅಥವಾ ವಿಡಿಯೋದಲ್ಲಿ ಸಚಿವ ಝಮೀರ್ ಅಹಮದ್ ಖಾನ್‌ರ ಹೆಸರಿಲ್ಲ. ವಿನಾಕಾರಣ ಅವರ ಹೆಸರನ್ನು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡ ಈಶ್ವರಪ್ಪ ಅವಹೇಳಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದ ಅವರು, ಮನ್ಸೂರ್ ಖಾನ್ ನೇರವಾಗಿ ಆರೋಪ ಮಾಡಿರುವ ರೋಷನ್ ಬೇಗ್ ಬಗ್ಗೆ ಜಾಣ ಮೌನ ವಹಿಸಿದ್ದಾರೆ ಎಂದರು.

ವಂಚಕ ಐಎಂಎ ಮಾಲಕ ಮನ್ಸೂರ್ ಖಾನ್‌ರನ್ನು ಬಂಧಿಸಬೇಕು ಹಾಗೂ ರೋಷನ್ ಬೇಗ್‌ಗೆ ನೀಡಿರುವ 400 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News