ಐಎಂಎ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ಸಚಿವ ಝಮೀರ್

Update: 2019-07-05 14:38 GMT

ಬೆಂಗಳೂರು, ಜು.5: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಈ.ಡಿ.) ಸಮನ್ಸ್ ಜಾರಿಗೊಳಿಸಿದ್ದ ಹಿನ್ನೆಲೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ವಿಚಾರಣೆಗೆ ಹಾಜರಾದರು.

ಶುಕ್ರವಾರ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮ ವಕೀಲರೊಂದಿಗೆ ಆಗಮಿಸಿದ ಸಚಿವ ಝಮೀರ್ ಅಹ್ಮದ್ ಖಾನ್ ಅವರು, ಆರೋಪಿ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಸಂಬಂಧದ ದಾಖಲೆ ಪತ್ರಗಳನ್ನು ಒದಗಿಸಿದರು.

ನಗರದ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನು ಮನ್ಸೂರ್ ಖಾನ್‌ಗೆ ಕಾನೂನು ಪ್ರಕಾರವೇ ಮಾರಾಟ ಮಾಡಿದ್ದೇನೆ. ಈ ಬಗ್ಗೆ ಯಾವುದೇ ರೀತಿಯ ತಪ್ಪು ನನ್ನಿಂದ ನಡೆದಿಲ್ಲ. ಆರೋಪಿ ಮಾಡಿರುವ ವಂಚನೆ ಹಾಗೂ ವ್ಯವಹಾರ ಕುರಿತು ಮಾಹಿತಿಯೂ ಇಲ್ಲ ಎಂದು ಈ.ಡಿ. ಅಧಿಕಾರಿಗಳಿಗೆ ಝಮೀರ್ ತಿಳಿಸಿದರು ಎನ್ನಲಾಗಿದೆ.

ಏನಿದು ಪ್ರಕರಣ?: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರಿಗೆ ಸಚಿವ ಝಮೀರ್ ಆಸ್ತಿ ಮಾರಾಟ ಮಾಡಿದ್ದರು. ಈ ಆಸ್ತಿ ಕುರಿತು ವಿವರಣೆ ಹಾಗೂ ಮನ್ಸೂರ್ ಬಗೆಗಿನ ಮಾಹಿತಿ ಕೇಳಿ ಜೂ.28ರಂದು ಜಾರಿ ನಿರ್ದೇಶನಾಲಯ (ಈ.ಡಿ.) ಸಮನ್ಸ್ ನೀಡಿತ್ತು. ಜುಲೈ 5ರೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಈ ಹಿನ್ನಲೆ ಶುಕ್ರವಾರ ವಿಚಾರಣೆಗೆ ಹಾಜರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News