ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಾಶೆ: ಡಿಸಿಎಂ ಪರಮೇಶ್ವರ್

Update: 2019-07-05 14:43 GMT

ಬೆಂಗಳೂರು, ಜು. 5: ಕರ್ನಾಟಕ ರಾಜ್ಯಕ್ಕೆ ಅತ್ಯಂತ ನಿರಾಶೆಯಾಗಿದೆ. ಬಸವಣ್ಣನ ಹೆಸರು ಹೇಳಿದನ್ನು ಬಿಟ್ಟರೆ ಕೇಂದ್ರ ಸರಕಾರ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಒಂದೂ ಯೋಜನೆ ಘೋಷಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇಂದ್ರ ಬಜೆಟ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಂಚಾದ ದಟ್ಟಣೆ ನಿವಾರಣೆಗೆ ಸಬ್‌ಅರ್ಬನ್ ರೈಲು ಕೊಡಿ ಎಂದು ಕೇಳಿದ್ದೆವು. ಆದರೆ, ಅದರ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಉಲ್ಲೇಖವನ್ನೂ ಮಾಡಿಲ್ಲ ಎಂದು ಟೀಕಿಸಿದರು.

ಪ್ರಸ್ತಾಪವೂ ಇಲ್ಲ: ಶೋಷಿತ ಸಮುದಾಯವಾಗಿರುವ ದಲಿತ ಸಮಾಜಕ್ಕೆ ಏನೇನೂ ಕೊಟ್ಟಿಲ್ಲ. ದಲಿತ, ಅಲ್ಪಸಂಖ್ಯಾತರ ಬಗ್ಗೆ ಬಜೆಟ್‌ನಲ್ಲಿ ಒಂದು ಶಬ್ದವನ್ನೂ ಉಲ್ಲೇಖಿಸಿಲ್ಲ. ಮಾಧ್ಯಮ ವರ್ಗಕ್ಕೂ ಏನೂ ನೀಡಿಲ್ಲ. ಉದ್ಯಮಿಗಳ ಋಣ ತೀರಿಸಲು ಕೇಂದ್ರ ಸರಕಾರ ಬಜೆಟ್ ಮಂಡಿಸಿದೆ ಎಂದು ಪರಮೇಶ್ವರ್ ದೂರಿದರು.

ಮೋದಿ ಸರಕಾರದ ಈ ಬಾರಿಯ ಬಜೆಟ್‌ನಷ್ಟು ಕೆಟ್ಟ ಬಜೆಟ್‌ನನ್ನು ನಾನೆಂದೂ ನೋಡಿಲ್ಲ. ಯಾವ ಕ್ಷೇತ್ರಕ್ಕು ಆದ್ಯತೆ ನೀಡದೆ ನೀರಸ ಬಜೆಟ್‌ನನ್ನು ಮಂಡಿಸಿದ್ದಾರೆ. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅತ್ಯಂತ ಕೆಟ್ಟ ಬಜೆಟ್ ಮಂಡಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಆದರೆ, ಯಾವ ಕ್ಷೇತ್ರಕ್ಕೂ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಆಕ್ಷೇಪಿಸಿದರು.

ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಅದಕ್ಕಾಗಿ ಜನರು ಅವರಿಗೆ ಎರಡನೆ ಬಾರಿ ಆಡಳಿತ ನಡೆಸಲು ಅವಕಾಶ ಕಲ್ಪಿಸಿದ್ದರು. ಆದರೆ, ಜನರ ನಿರೀಕ್ಷೆಯನ್ನು ಸಂಪೂರ್ಣ ಹುಸಿ ಮಾಡಿದ್ದಾರೆ. ಇಷ್ಟು ವರ್ಷದ ಕೇಂದ್ರದ ಆಡಳಿತದಲ್ಲಿ ಇಷ್ಟು ಕೆಟ್ಟ ಬಜೆಟ್ ಬಂದಿಲ್ಲ ಎಂದು ವ್ಯಾಖ್ಯಾನಿಸಿದರು.

ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಕೇವಲ 3 ಲಕ್ಷ ಕೋಟಿ ರೂ. ಹೆಚ್ಚಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ. ರೈತರು ಈ ದೇಶದ ಬೆನ್ನೆಲುಬು. ಅವರಿಗೂ ಯಾವ ಹೊಸ ಯೋಜನೆಯನ್ನೂ ಘೋಷಣೆ ಮಾಡಿಲ್ಲ. ಸಾಲಮನ್ನಾ ಬಗ್ಗೆಯೂ ನಿರೀಕ್ಷೆ ಇತ್ತು. ಆದರೆ, ಉಲ್ಲೇಖ ಮಾಡಿಲ್ಲ. ರೈತರನ್ನೇ ಈ ಸರಕಾರ ನಿರ್ಲಕ್ಷ್ಯ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಮೀಸಲಿಟ್ಟಿಲ್ಲ. ಕೇವಲ 60 ಸಾವಿರ ಕೋಟಿ ರೂ.ಇಟ್ಟಿದ್ದು, ಯಾವುದಕ್ಕೂ ಸಾಲದು. 12 ಸಾವಿರ ಕೋಟಿ ರೂ. ಬಾಕಿಯೆ ಇನ್ನೂ ಕೊಟ್ಟಿಲ್ಲ ಎಂದು ಅವರು ಟೀಕಿಸಿದರು.

ಆಧಾರ್ ಕಾರ್ಡ್ ಹೊಂದಿಕೆ ಮಾಡುವುದು ದೊಡ್ಡದಲ್ಲ. ಡಿಜಿಟಲ್ ಮಾಡುತ್ತೇವೆಂದು ಹೇಳಿಕೊಂಡು ಏನೂ ಮಾಡಿಲ್ಲ. ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ಕೊಟ್ಟಿಲ್ಲ. ಕೈಗಾರಿಕೆ ಕ್ಷೇತ್ರಕ್ಕೂ ಆದ್ಯತೆ ಇಲ್ಲ. ವಿದೇಶಿ ನೇರ ಹೂಡಿಕೆಗೆ ಒತ್ತು ನೀಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ ಎಂದರು.

ಇಂಥ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸುತ್ತೇವೆ ಎಂದೂ ಉಲ್ಲೇಖಿಸಿಲ್ಲ. 5 ಟ್ರಿಲಿಯನ್ ಡಾಲರ್ ಎಕನಾಮಿ ಮಾಡುತ್ತೇವೆ ಎನ್ನುವವರು ಅದಕ್ಕೆ ತಕ್ಕನಾದ ವಾತಾವರಣ ನಿರ್ಮಾಣ ಮಾಡ ಬೇಕಲ್ಲವೇ, ಅದನ್ನು ಮಾಡಿಲ್ಲ. 2.5 ಟ್ರಿಲಿಯನ್ ಟಾಲರ್‌ಗೆ ತಲುಪಲು ಇಷ್ಟು ವರ್ಷ ಬೇಕಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News