ಜಲಮಂಡಳಿ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡ ಮೇಯರ್ ಗಂಗಾಂಬಿಕೆ

Update: 2019-07-05 14:46 GMT

ಬೆಂಗಳೂರು, ಜು.5: ಸಾರಕ್ಕಿ ಕೆರೆ ಸುತ್ತಲೂ ಜಲಮಂಡಳಿಯಿಂದ ಸ್ಯಾನಿಟರಿ ಪೈಪ್ ಲೈನ್ ಅಳವಡಿಸಬೇಕು. ಆದರೆ ಇರುವರೆಗೆ ಜಲಮಂಡಳಿ ಯಾವುದೇ ಕಾಮಗಾರಿ ಪ್ರಾರಂಭಿಸದೇ ಇರುವುದನ್ನು ಕಂಡು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ನಗರದ ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ತಪಾಸಣೆ ವೇಳೆ ಜಲಮಂಡಳಿ ಅಧಿಕಾರಿಗಳ ಕುರಿತು ಕಿಡಿಕಾರಿದ ಅವರು, ನೀವು ಮಾಡಬೇಕಿರುವ ಕೆಲಸವನ್ನು ಬಿಬಿಎಂಪಿ ವತಿಯಿಂದ ಮಾಡಲಾಗುತ್ತಿದೆ. ಪ್ರತಿ ಬಾರಿಯೂ ನಿಮಗೆ ನೆನಪಿಸುತ್ತಲೇ ಇರಬೇಕಾ, ತ್ಯಾಜ್ಯ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. ನಾವು ಕೋಟ್ಯಂತರ ರೂ. ವ್ಯಯಿಸಿ ಕಾಮಗಾರಿ ನಡೆಸುತ್ತಿರುವುದು ತ್ಯಾಜ್ಯ ನೀರು ಕೆರೆಗೆ ಸೇರುವುದಕ್ಕಾ ಎಂದು ಬೇಸರದಿಂದ ಪ್ರಶ್ನಿಸಿದರು.

ಜರಗನಹಳ್ಳಿ ವಾರ್ಡ್ ವ್ಯಾಪ್ತಿಗೆ ಸೇರಿರುವ ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಲ್ಲದೆ ಕೆರೆ ಭಾಗದಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು, ಅದನ್ನು ಕೂಡಲೆ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮೇಯರ್ ಕರೆ ಮಾಡಿ ತಿಳಿಸಿದರು.

ಕೆರೆಯನ್ನು 2016ರಲ್ಲಿ ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರಿಸಲಾಯಿತು. ಬಳಿಕ ಕೆರೆ ಅಭಿವೃದ್ಧಿಗೆ 2016- 17ರಲ್ಲಿ ರಾಜ್ಯ ಸರಕಾರದ ನಗರೋತ್ಥಾನ ಅನುದಾನದಡಿ 6 ಕೋಟಿ ರೂ., 2017-18ರಲ್ಲಿ ಜಿಒಕೆ ಅನುದಾನದಡಿ 5.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಳೆದ ವರ್ಷ ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇನ್ನು, ಈಗಾಗಲೇ ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸಿ ಅದರ ಮೇಲೆ ತಂತಿಬೇಲಿ ಅಳವಡಿಸುವ ಹಾಗೂ ಎರಡು ಮುಖ್ಯ ದ್ವಾರಗಳ ನಿರ್ಮಾಣ ಕಾರ್ಯ ಮುಗಿದಿದೆ. ಮಳೆ ನೀರು ಕೆರೆಗೆ ಸರಾಗವಾಗಿ ಸೇರಲು ಒಂಬತ್ತು ಕಡೆ ಸಿಮೆಂಟ್ ಕೊಳವೆಗಳನ್ನು ಅಳವಡಿಸಲಾಗಿದೆ. 3.2 ಕಿ.ಮೀ ಉದ್ದದ ವಾಯುವಿಹಾರ ಪಥ ನಿರ್ಮಾಣದ ಕೆಲಸ ಮತ್ತು ಎರಡು ಕಡೆ ಕೋಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು ಅಧಿಕಾರಿಗಳು ಮಾಹಿತಿ ನೀಡಿದರು.

ತಪಾಸಣೆ ಸಂದರ್ಭದಲ್ಲಿ ಆಡಳಿತ ಪಕ್ಷದ ಮುಖಂಡರು, ಸದಸ್ಯರುಗಳು, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಅರಣ್ಯ ಉಪ ಸಂರಕ್ಷಣಾಧಿಕಾರಿ (ಕೆರೆಗಳು), ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

14.49 ಕೋಟಿಯಲ್ಲಿ ಎಸ್‌ಟಿಪಿ ಅಳವಡಿಕೆ

ಜರಗನಹಳ್ಳಿ ಮತ್ತು ಆರ್‌ಬಿಐ ಬಡಾವಣೆಗಳಿಂದ ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಜಲಮಂಡಳಿ ವತಿಯಿಂದ ಎಂಟು ಎಕರೆ ಪ್ರದೇಶದಲ್ಲಿ 14.49 ಕೋಟಿ ರೂ. ವ್ಯಯಿಸಿ 50 ಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ಎಸ್‌ಟಿಪಿಯಿಂದ ಸಂಸ್ಕರಿಸುವ ನೀರನ್ನು ವಾಯುವಿಹಾರದ ಪಕ್ಕದಲ್ಲಿ ಕೊಳವೆಗಳನ್ನು ಅಳವಡಿಸಿ ಕೆರೆಗೆ ಬಿಡಲಾಗುವುದು ಎಂದು ಜಲಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರರು ಮೇಯರ್‌ಗೆ ಮಾಹಿತಿ ನೀಡಿದ್ದಾರೆ.

ನವ ಬೆಂಗಳೂರು ಅನುದಾನ

2019-20ರಲ್ಲಿ ನವ ಬೆಂಗಳೂರು ಅನುದಾನದಡಿ 5 ಕೊಟಿ ರೂ. ಬಿಡುಗಡೆಯಾಗಿದ್ದು, ಕೆರೆ ಅಂಗಳದಲ್ಲಿ ಉದ್ಯಾನ, ಒಂದು ಕಲ್ಯಾಣಿ, ಮಕ್ಕಳಿಗೆ ಆಟದ ಮೈದಾನ, ದೋಣಿ ವಿಹಾರ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಸಾರಕ್ಕಿ ಕೆರೆಯನ್ನು ನಗರದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News