ಪ್ರಮುಖ ತಪ್ಪುಗಳನ್ನು ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಬಜೆಟನ್ನು ಟೀಕಿಸಿದ ಸುಬ್ರಮಣಿಯನ್ ಸ್ವಾಮಿ!

Update: 2019-07-06 14:46 GMT

 ಹೊಸದಿಲ್ಲಿ, ಜು.6: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಥಮ ಬಜೆಟ್ ಅವರ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಂದಲೇ ಟೀಕೆಗೊಳಗಾಗಿದೆ. ಬಜೆಟಿನಲ್ಲಿನ ಕೆಲವೊಂದು ಪ್ಯಾರಾಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಅವರು ತಮ್ಮ ಟ್ವೀಟ್ ಗಳ ಕೊನೆಗೆ ‘ಹರೇ ರಾಮ್’ ಹಾಗೂ ‘ಸ್ವೀಟ್ ಡ್ರೀಮ್ಸ್’ ಪದಗಳ ಬಳಕೆಯನ್ನೂ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಸ್ವಾಮಿ ವಿತ್ತ ಸಚಿವೆಯಲ್ಲಿ ಹಲವು ಪ್ರಶ್ನೆಗಳನ್ನೆತ್ತಿದ್ದಾರೆ.

“ವಿತ್ತ ಸಚಿವರ ಬಜೆಟ್ ಭಾಷಣದ ಪ್ಯಾರಾ 8ರಲ್ಲಿ ‘ಜಿಡಿಪಿ ಈಗ ಜಗತ್ತಿನಲ್ಲಿ ಆರನೇ ಅತ್ಯಂತ ಹೆಚ್ಚಿನ ಜಿಡಿಪಿಯಾಗಿದೆ. ಖರೀದಿ ಸಾಮರ್ಥ್ಯದಲ್ಲಿ ನಾವು ಈಗಾಗಲೇ ಜಗತ್ತಿನ 3ನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿದ್ದೇವೆ. ಆದರೆ ಯಾವುದು ಸರಿ ? 6 ಅಥವಾ 3, ಎರಡೂ ಆಗಲು ಸಾಧ್ಯವಿಲ್ಲ'' ಎಂದು ಒಂದು ಟ್ವೀಟ್ ನಲ್ಲಿ ಸ್ವಾಮಿ  ಹೇಳಿದರೆ, ಇನ್ನೊಂದು ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ. “ಪ್ಯಾರಾ 10 – 1 ಲಕ್ಷ ಕೋಟಿ ಡಾಲರ್ ತಲುಪಲು 55 ವರ್ಷಗಳಾಗಿತ್ತು, ನಾವು 5 ವರ್ಷಗಳಲ್ಲಿ 1 ಲಕ್ಷ ಕೋಟಿ ಡಾಲರ್  ಸೇರಿಸಿದ್ದೇವೆ, ಇಂದು  ನಾವು 3 ಲಕ್ಷ ಕೋಟಿ ಡಾಲರ್  ಹತ್ತಿರಕ್ಕೆ ಬರುತ್ತಿದ್ದೇವೆ''  55 ವರ್ಷ ಯಾವಾಗಿನಿಂದ?, ಒಂದು ಲಕ್ಷ ಕೋಟಿ ಡಾಲರ್ ಮೇ 26, 2019ರೊಳಗಾಗಿ ಸೇರಿಸಲಾಯಿತೇ?, 3 ಲಕ್ಷ ಕೋಟಿ ಡಾಲರ್ ಹತ್ತಿರಕ್ಕೆ ಬರುತ್ತಿದ್ದೇವೆ? ಅಂದರೆ ಕೇವಲ ಆರು ವಾರಗಳಲ್ಲಿ 1 ಲಕ್ಷ ಕೋಟಿ ಡಾಲರ್? ಹರೇ ರಾಮ್!''.

ಸ್ವಾಮಿಯ ಮೂರನೇ ಟ್ವೀಟ್ ಹೀಗಿತ್ತು- “ಬಜೆಟ್ ನಲ್ಲಿನ ಟಾರ್ಗೆಟ್ ನಂತೆ ಬೇಸ್ ವರ್ಷ 2018ರಿಂದ ರೈತರ ಆದಾಯವನ್ನು 2022ರೊಳಗಾಗಿ ದ್ವ್ವಿಗುಣಗೊಳಿಸುವುದಾಗಿತ್ತು. ಅಂದರೆ 4 ವರ್ಷಗಳಲ್ಲಿ ದ್ವಿಗುಣವೆಂದರೆ ವಾರ್ಷಿಕ ಪ್ರಗತಿ ಶೇ.18ರಷ್ಟು. ಆದರೆ ಈಗ ರೈತರ ಆದಾಯ ಶೇ 2.0ರಷ್ಟು ಏರಿಕೆಯಾಗುತ್ತಿದೆ. ಸ್ವೀಟ್ ಡ್ರೀಮ್ಸ್'' ಎಂದು ಸ್ವಾಮಿ ಬರೆದಿದ್ದಾರೆ.

ತಮ್ಮ ಟ್ವೀಟ್ ಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸ್ವಾಮಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News