ನಿರೂಪಕಿಯನ್ನು ನಗೆಪಾಟಲಿಗೀಡು ಮಾಡಿದ ‘ಆ್ಯಪಲ್’!: ವಿಡಿಯೋ ವೈರಲ್

Update: 2019-07-06 15:23 GMT

ಇಸ್ಲಾಮಾಬಾದ್, ಜು.6: ಪಾಕಿಸ್ತಾನದ ಸುದ್ದಿ ನಿರೂಪಕಿಯೊಬ್ಬರು ನೇರ ಪ್ರಸಾರ ಚರ್ಚಾ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಆ್ಯಪಲ್ ಅನ್ನು ಸೇಬುಹಣ್ಣೆಂದು ತಪ್ಪಾಗಿ ತಿಳಿದುಕೊಂಡ ಘಟನೆ ಟ್ವಿಟರಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞರೊಬ್ಬರು ಆ್ಯಪಲ್ ಕಂಪೆನಿಯ ಆರ್ಥಿಕ ಪರಿಸ್ಥಿತಿಯನ್ನು ಪಾಕಿಸ್ತಾನದ ಆರ್ಥಿಕ ಸ್ಥಿತಿಗೆ ಹೋಲಿಸುತ್ತಾ, “ಆ್ಯಪಲ್ ನ ವಹಿವಾಟಿನ ಮೊತ್ತ ಪಾಕಿಸ್ತಾನದ ಬಜೆಟ್ ಗಿಂತಲೂ ಬಹಳ ಹೆಚ್ಚು” ಎಂದಾಗ ನಿರೂಪಕಿ ಪ್ರತಿಕ್ರಿಯಿಸುತ್ತಾ ``ಹೌದು ಆ್ಯಪಲ್ (ಸೇಬು ಹಣ್ಣು) ಉದ್ಯಮ ಇತ್ತೀಚೆಗೆ ಬಹಳಷ್ಟು ಉತ್ತಮವಾಗಿದ್ದು ಬಹಳಷ್ಟು ವಿಧದ ಆ್ಯಪಲ್‍ಗಳಿವೆ'' ಎಂದು ಬಿಟ್ಟರು. ಆಗ ಚರ್ಚೆಯಲ್ಲಿ ಭಾಗವಹಿಸಿದ ತಜ್ಞರು, “ನಾನು ಆ್ಯಪಲ್ ಕಂಪೆನಿಯ ಬಗ್ಗೆ ಮಾತನಾಡುತ್ತಿದ್ದೇನೆ, ಹಣ್ಣಿನ ಬಗ್ಗೆ ಅಲ್ಲ” ಎಂದರು.

ಪಾಕ್ ಪತ್ರಕರ್ತರೊಬ್ಬರು ಈ ವೀಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿದೆಯಲ್ಲದೆ ಟ್ವಿಟ್ಟರಿಗರು ಆಕೆಯನ್ನು ಟ್ರೋಲ್ ಮಾಡಿದ್ದಾರೆ.

“ಇದು ಸುದ್ದಿ ವಾಹಿನಿಯೇ ಅಥವಾ ಕಾಮಿಡಿ ಶೋ ಕಾರ್ಯಕ್ರಮವೇ?” ಎಂದು ಒಬ್ಬರು ಪ್ರಶ್ನಿಸಿದರೆ ಇನ್ನೊಬ್ಬರು, “ಇದೇ ಕಾರಣಕ್ಕೆ ಜನರು ‘ಆ್ಯನ್ ಆ್ಯಪಲ್  ಎ ಡೇ ಕೀಪ್ಸ್ ಎ ಡಾಕ್ಟರ್ ಅವೇ’ ಅನ್ನುವುದು ಹಾಗೂ ಸೈಕ್ಯಾಟ್ಟಿಸ್ಟ್ ಅವೇ ಅನ್ನುವುದಿಲ್ಲ” ಎಂದು ಬರೆದಿದ್ದಾರೆ.

‘ಇದು ಪಾಕ್ ಪತ್ರಿಕೋದ್ಯಮದ ಮಟ್ಟ' ಎಂದು ಒಬ್ಬ ಟ್ವಿಟ್ಟರಿಗ ಅಪಹಾಸ್ಯಗೈದರೆ, ಇನ್ನೊಬ್ಬರು ``ಶೋ ನಂತರ ಖರೀದಿಸಬೇಕಾದ ಸಾಮಾನಿನ ಬಗ್ಗೆ ನಿರೂಪಕಿ ಯೋಚಿಸುತ್ತಿದ್ದಾರೆ'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News