ಇರಾನ್ ತೈಲ ಟ್ಯಾಂಕರ್ ವಶಕ್ಕೆ ಪ್ರತಿಯಾಗಿ ಬ್ರಿಟನ್ ಹಡಗು ವಶ

Update: 2019-07-06 17:02 GMT

ರೆವಲೂಶನರಿ ಗಾರ್ಡ್ಸ್ ಎಚ್ಚರಿಕೆ

ಲಂಡನ್, ಜು. 6: ಬ್ರಿಟನ್‌ನ ರಾಯಲ್ ಮರೀನ್ (ನೌಕಾ) ಸೈನಿಕರು ಜಿಬ್ರಾಲ್ಟರ್‌ನಲ್ಲಿ ಇರಾನ್‌ನ ತೈಲವಾಹಕ ಸೂಪರ್ ಟ್ಯಾಂಕರೊಂದನ್ನು ವಶಪಡಿಸಿಕೊಂಡಿರುವುದಕ್ಕೆ ಪ್ರತಿಯಾಗಿ, ಬ್ರಿಟನ್ ಹಡಗೊಂದನ್ನು ವಶಪಡಿಸಿಕೊಳ್ಳುವುದಾಗಿ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಕಮಾಂಡರ್ ಒಬ್ಬರು ಶುಕ್ರವಾರ ಬೆದರಿಕೆ ಹಾಕಿದ್ದಾರೆ.

‘‘ಇರಾನ್‌ನ ತೈಲ ಟ್ಯಾಂಕರನ್ನು ಬ್ರಿಟನ್ ಬಿಡುಗಡೆ ಮಾಡದಿದ್ದರೆ, ಬ್ರಿಟಿಶ್ ತೈಲ ಟ್ಯಾಂಕರೊಂದನ್ನು ವಶಪಡಿಸಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ’’ ಎಂಬುದಗಿ ಮುಹ್ಸಿನ್ ರಿಝಾಯಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಜಿಬ್ರಾಲ್ಟರ್‌ನಲ್ಲಿ ರಾಯಲ್ ಮರೀನ್‌ಗಳು ಇರಾನ್‌ನ ಸೂಪರ್ ಟ್ಯಾಂಕರನ್ನು ವಶಪಡಿಸಿಕೊಂಡಿರುವುದಕ್ಕೆ ಇರಾನ್‌ನ ಸಂಭಾವ್ಯ ಪ್ರತೀಕಾರದ ಬಗ್ಗೆ ಬ್ರಿಟನ್ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಇರಾನ್‌ನ ಪ್ರಭಾವಿ ಧಾರ್ಮಿಕ ನಾಯಕರೊಬ್ಬರು ಹೇಳಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ಫಾರ್ಸ್’ ಶನಿವಾರ ವರದಿ ಮಾಡಿದೆ.

‘‘ಇರಾನ್‌ನ ತೈಲ ಟ್ಯಾಂಕರನ್ನು ಅಕ್ರಮವಾಗಿ ಹಿಡಿದಿಟ್ಟಿರುವುದಕ್ಕೆ ಪ್ರತಿಯಾಗಿ ಇರಾನ್ ತೆಗೆದುಕೊಳ್ಳಬಹುದಾದ ಪ್ರತೀಕಾರಾತ್ಮಕ ಕ್ರಮಗಳ ಬಗ್ಗೆ ಬ್ರಿಟನ್ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ’’ ಎಂದು ಮುಹಮ್ಮದ್ ಅಲಿ ವೌಸವಿ ಜಝಯೆರಿ ಹೇಳಿದ್ದಾರೆ.

‘‘ಪೀಡನೆಯನ್ನು ಸಹಿಸಿಕೊಂಡು ನಾವು ಯಾವತ್ತೂ ಕೂರುವುದಿಲ್ಲ ಎನ್ನುವುದನ್ನು ನಾವು ಈಗಾಗಲೇ ತೋರಿಸಿದ್ದೇವೆ. ಅಮೆರಿಕದ ಡ್ರೋನ್‌ಗೆ ನಾವು ತೋರಿಸಿರುವ ಕಟು ಪ್ರತಿಕ್ರಿಯೆಯಂತೆಯೇ, ಈ ಅಕ್ರಮ ಕೃತ್ಯಕ್ಕೂ ನಾವು ಸೂಕ್ತ ಪ್ರತಿಕ್ರಿಯೆ ತೋರಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ಬ್ರಿಟಿಶ್ ಭೂಭಾಗವಾಗಿರುವ ಜಿಬ್ರಾಲ್ಟರ್ ಕರಾವಳಿಯ ಸಮುದ್ರದಲ್ಲಿ ಗುರುವಾರ ಬ್ರಿಟಿಶ್ ರಾಯಲ್ ಮರೀನ್‌ಗಳು ಇರಾನ್‌ನಿಂದ ತೈಲ ಹೇರಿಕೊಂಡು ಸಿರಿಯಕ್ಕೆ ಹೋಗುತ್ತಿತ್ತು ಎನ್ನಲಾದ ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News