ರನ್‌ರೇಟ್ ನಿಯಮ ಮರುಪರಿಶೀಲಿಸಲು ಪಾಕ್ ಕೋಚ್ ಆಗ್ರಹ

Update: 2019-07-07 11:26 GMT

ಮ್ಯಾಂಚೆಸ್ಟರ್, ಜು.6: ನಿವ್ವಳ ರನ್‌ರೇಟ್‌ಗಿಂತಲೂ ತಂಡಗಳ ಮುಖಾಮುಖಿ ದಾಖಲೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಆರ್ಥರ್ ಐಸಿಸಿಯನ್ನು ಆಗ್ರಹಿಸಿದ್ದಾರೆ.

ಸೆಮಿಫೈನಲ್ ಪ್ರವೇಶಿಸುವ ತಂಡಗಳನ್ನು ಗುರುತಿಸಲು ನಿವ್ವಳ ರನ್‌ರೇಟ್ ಗಮನಿಸುವ ಬದಲು, ಎರಡು ತಂಡಗಳ ಮುಖಾಮುಖಿ ದಾಖಲೆಗೆ ಪ್ರಾಧಾನ್ಯತೆ ನೀಡಬೇಕು. ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ನಾವು ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿದ್ದೇವೆ. ಆದರೂ ಸೆಮಿಫೈನಲ್ ಪ್ರವೇಶಿಸಲು ರನ್‌ರೇಟ್ ನಿಯಮ ಅಡ್ಡಿಯಾಗಿದೆ. ಆದರೆ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಇದರರ್ಥ ನಮ್ಮ ತಂಡ ವಿಶ್ವದ ಬಲಿಷ್ಠ ತಂಡಗಳ ಸಾಲಲ್ಲಿ ನಿಲ್ಲುತ್ತದೆ ಎಂದು ಆರ್ಥರ್ ಹೇಳಿದರು.

ವೆಸ್ಟ್‌ಇಂಡೀಸ್ ವಿರುದ್ಧ ಪ್ರಥಮ ಪಂದ್ಯದಲ್ಲಿ ನಮಗಾದ ಹೀನಾಯ ಸೋಲು ನಮ್ಮ ಹಿನ್ನಡೆಗೆ ಕಾರಣವಾಗಿದೆ. ಆ ಪಂದ್ಯದಲ್ಲಿ ನಮ್ಮ ತಂಡ ಕೇವಲ 105ಕ್ಕೆ ಆಲೌಟಾಗಿತ್ತು. ಈ ಕಳಪೆ ಆಟ ತಂಡದ ಮುನ್ನಡೆಯ ಮೇಲೆ ಪರಿಣಾಮ ಬೀರಿದೆ ಎಂದು ಆರ್ಥರ್ ವಿಶ್ಲೇಷಿಸಿದರು. ಬಾಂಗ್ಲಾದೇಶ ತಂಡದ ಎದುರಿನ ಅಂತಿಮ ಲೀಗ್ ಪಂದ್ಯದಲ್ಲಿ 400 ಕ್ಕೂ ಅಧಿಕ ರನ್ ಗಳಿಸುವ ಬಗ್ಗೆ ಚಿಂತನೆ ನಡೆದಿತ್ತು. ಈ ನಿಟ್ಟಿನಲ್ಲಿ ಉತ್ತಮ ಆರಂಭದ ಅಗತ್ಯವಿತ್ತು. ಆರಂಭದ 10 ಓವರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ಬಳಿಕ ವೇಗದ ಆಟಕ್ಕೆ ಒತ್ತು ನೀಡಲು ನಿರ್ಧರಿಸಿದ್ದೆವು. ಆದರೆ ಆರಂಭಿಕ ಆಟಗಾರ ಫಾಕರ್ ಝಮಾನ್ ಔಟಾಗಿ ಪೆವಿಲಿಯನ್‌ಗೆ ವಾಪಸಾದವರು ಪಿಚ್ ಕಠಿಣವಾಗಿದೆ ಎಂದರು. ಆಗ 400 ರನ್‌ಗಳ ಗುರಿ ಅಸಾಧ್ಯ ಎಂದು ಅರಿವಾಗಿ 270 ರನ್‌ಗಳ ಗುರಿ ಇರಿಸಿಕೊಂಡೆವು ಮತ್ತು ಗೆಲ್ಲಲು ಆದ್ಯತೆ ನೀಡಿದೆವು ಎಂದು ಆರ್ಥರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News