ವಾರ್ನರ್ ಶತಕ ವ್ಯರ್ಥ: ಆಫ್ರಿಕಾ ವಿರುದ್ಧ ಆಸೀಸ್‌ಗೆ ವೀರೋಚಿತ ಸೋಲು

Update: 2019-07-07 04:19 GMT

ಮ್ಯಾಂಚೆಸ್ಟರ್: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಶತಕ (122) ಸಾಧನೆಯ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ರನ್‌ಗಳ ವೀರೋಚಿತ ಸೋಲು ಕಂಡಿತು.

ಚೆಂಡು ವಿರೂಪಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ 12 ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದರು.

ವಿಶ್ವಕಪ್‌ನಲ್ಲಿ ಮೂರನೇ ಶತಕ ಸಾಧಿಸಿದ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 326 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಒಂದು ಹಂತದಲ್ಲಿ 119 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ವಾರ್ನರ್ ಜತೆಗೆ ಅಲೆಕ್ಸ್ ಕಾರೆ (85) ಆಧರಿಸಿದರು. ಐದನೇ ವಿಕೆಟ್‌ಗೆ 108 ರನ್ ಸೇರಿಸಿದ ಈ ಜೋಡಿ ಆಸ್ಟ್ರೇಲಿಯಾ ಗೆಲುವಿನ ಆಸೆ ಚಿಗುರುವಂತೆ ಮಾಡಿದರು.

ಇದಕ್ಕೂ ಮುನ್ನ ಫಾಫ್ ಡ್ಯುಪ್ಲೆಸಿಸ್ (100) ಮತ್ತು ರಸ್ಸೀ ವನ್ ದೆರ್ ದುಸ್ಸೆನ್ (95) ಅವರ ಜೀವನಶ್ರೇಷ್ಠ ಸಾಧನೆಯಿಂದಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 325 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.

ಆಸ್ಟ್ರೇಲಿಯಾ ನಾಯಕ ಹಾಗೂ ಆರಂಭಿಕ ಆಟಗಾರ ಅರನ್ ಫಿಂಚ್ ಇಮ್ರಾನ್ ತಾಹೀರ್‌ಗೆ ಮೊದಲ ಬಲಿಯಾಗಿ ನಿರ್ಗಮಿಸಿದರು. ವಾರ್ನರ್ ಅವರಂತೆ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಸ್ಟೀವ್ ಸ್ಮಿತ್ (7) ಕೂಡಾ ಡವಾನ್ ಪೆಟ್ರೋಸ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಪ್ರಸಕ್ತ ವಿಶ್ವಕಪ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ವಾರ್ನರ್, ಪೆಟ್ರೋಸ್ ಅವರಿಗೆ ವಿಕೆಟ್ ಒಪ್ಪಿಸಿದರು. 69 ಎಸೆತಗಳಲ್ಲಿ 95 ರನ್ ಸಿಡಿಸಿದ ಕಾರೇ ಅವರು ಮೋರಿಸ್ ಬೌಲಿಂಗ್‌ನಲ್ಲಿ ಮಾರ್ಕ್ರಮ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ 46 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತು.

ಗೆಲುವಿನ ಗುರಿಯನ್ನು 12 ಎಸೆತಗಳಲ್ಲಿ 25 ರನ್‌ಗಳಿಗೆ ಇಳಿಸಿದ ಉಸ್ಮಾನ್ ಖವಾಜಾ (18) ಕಸಿಗೊ ರಬಡಾ ಅವರಿಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 18 ರನ್‌ಗಳನ್ನು ಆಸ್ಟ್ರೇಲಿಯಾ ಪಡೆಯಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News