ಕಾರುಬಾಂಬ್ ಸ್ಫೋಟಕ್ಕೆ ಕನಿಷ್ಟ 12 ಬಲಿ

Update: 2019-07-07 16:10 GMT

ಕಾಬೂಲ್, ಜು.7: ಅಪಘಾನಿಸ್ತಾನದ ಕೇಂದ್ರ ಘಜ್ನಿ ಪ್ರದೇಶದಲ್ಲಿ ರವಿವಾರ ಸಂಭವಿಸಿದ ಕಾರು ಬಾಂಬ್ ಸ್ಫೋಟದಿಂದ ಕನಿಷ್ಟ 12 ಮಂದಿ ಬಲಿಯಾಗಿದ್ದಾರೆ. ಸತ್ತವರಲ್ಲಿ 8 ಅಪಘಾನಿಸ್ತಾನದ ಭದ್ರತಾ ಸಿಬ್ಬಂದಿ , ನಾಲ್ವರು ನಾಗರಿಕರು ಸೇರಿದ್ದಾರೆ. ತಾಲಿಬಾನ್ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ರಾಷ್ಟ್ರೀಯ ಭದ್ರತಾ ಮಹಾನಿರ್ದೇಶನಾಲಯ(ಎನ್‌ಡಿಎಸ್)ದ ಆವರಣಗೋಡೆಯ ಬಳಿ ರವಿವಾರ ಬಾಂಬ್ ದಾಳಿ ನಡೆಸಲಾಗಿದೆ. ರವಿವಾರದ ಜನಜಂಗುಳಿಯ ಸಮಯದಲ್ಲಿ ಕಾರು ಬಾಂಬ್ ಸ್ಫೋಟದಿಂದ 12ಕ್ಕೂ ಹೆಚ್ಚು ಎನ್‌ಡಿಎಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ, 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಎನ್‌ಡಿಎಸ್‌ನ 8 ಸಿಬಂದಿ ಹಾಗೂ ನಾಲ್ವರು ನಾಗರಿಕರು ಮೃತಪಟ್ಟಿರುವುದಾಗಿ ಮತ್ತು 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿರುವುದಾಗಿ ಘಜ್ನಿ ಪ್ರಾಂತೀಯ ಸರಕಾರದ ವಕ್ತಾರ ಆರಿಫ್ ನೂರಿ ದೃಢಪಡಿಸಿದ್ದಾರೆ.

ಆತ್ಮಹತ್ಯಾ ದಾಳಿಕೋರ ಬಾಂಬಿನೊಂದಿಗೆ ಕಾರಿನಲ್ಲಿದ್ದನೇ ಅಥವಾ ಕಾರಿನಲ್ಲಿ ಬಾಂಬ್ ಇರಿಸಿ ಸ್ಫೋಟಿಸಲಾಗಿತ್ತೇ ಎಂಬುದು ಇನ್ನೂ ಖಚಿತವಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News