ಏರ್ ಇಂಡಿಯಾ: ಶೇ.100 ಪಾಲು ಬಂಡವಾಳ ಮಾರಾಟಕ್ಕೆ ಕೇಂದ್ರ ಸರಕಾರದ ಚಿಂತನೆ

Update: 2019-07-07 16:49 GMT

ಹೊಸದಿಲ್ಲಿ,ಜು.7: ನಷ್ಟದಲ್ಲಿರುವ ಏರ್ ಇಂಡಿಯಾದ ಮಾರಾಟ ಸಂದರ್ಭದಲ್ಲಿ ತನ್ನ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲು ಸರಕಾರವು ಮುಂದಾಗಬಹುದು,ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಸಚಿವರ ಸಮಿತಿಯೊಂದು ತೆಗೆದುಕೊಳ್ಳಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ  ಹೇಳಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಆಸಕ್ತರು ಏರ್ ಇಂಡಿಯಾದ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಬಯಸಿದರೆ ಅದಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವುದು ಸರಕಾರದಲ್ಲಿಯ ಸಾಮಾನ್ಯ ಅಭಿಪ್ರಾಯವಾಗಿದೆ. ನಿರ್ದಿಷ್ಟ ನಿರ್ಧಾರವೊಂದನ್ನು ತೆಗೆದುಕೊಂಡಾಗ ಮಾತ್ರ ತಾನು ಈ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ಶೇ.100ರಷ್ಟು ಹೂಡಿಕೆ ಹಿಂದೆಗೆತದಲ್ಲಿ ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುವುದು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.

ಕಚ್ಚಾತೈಲ ಬೆಲೆಗಳಲ್ಲಿಯ ಏರಿಳಿತಗಳು ಕಾರಣವೆಂದು ಹೇಳಲಾಗಿತ್ತಾದರೂ ಖರೀದಿದಾರರಿಂದ ಸೂಕ್ತ ಸ್ಪಂದನದ ಕೊರತೆಯಿಂದ ಕಳೆದ ವರ್ಷ ಸ್ಥಗಿತಗೊಳಿಸಿದ್ದ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಸರಕಾರವು ಇತ್ತೀಚಿಗೆ ಪುನರಾರಂಭಿಸಿದೆ. ನೀತಿ ಆಯೋಗವು ಸಂಪೂರ್ಣ ಹೂಡಿಕೆ ಹಿಂದೆಗೆತದ ಪ್ರಸ್ತಾವವನ್ನಿಟ್ಟಿತ್ತಾದರೂ ಸರಕಾರವು ಶೇ.74ರಷ್ಟು ಪಾಲುಬಂಡವಾಳವನ್ನು ಮಾರಾಟಕ್ಕಿಟ್ಟಿತ್ತು. ಇದು ಖರೀದಿದಾರರ ಆಸಕ್ತಿ ಕಡಿಮೆಯಾಗಲು ಕಾರಣಗಳಲ್ಲೊಂದಾಗಿತ್ತು ಎನ್ನಲಾಗಿದೆ.

ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಹಾಲಿ ವಿತ್ತವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಸರಕಾರವು ಬಯಸಿರುವುದರಿಂದ ಮಾರಾಟಕ್ಕಿಡಲಾಗುವ ಪಾಲು ಬಂಡವಾಳದ ಪ್ರಮಾಣವನ್ನು ಈಗ ಸಚಿವರ ಸಮಿತಿಯೊಂದು ನಿರ್ಧರಿಸಲಿದೆ ಎಂದು ಚಕ್ರವರ್ತಿ ತಿಳಿಸಿದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News