ಈ 'ಅತೃಪ್ತರನ್ನು' ತೃಪ್ತಿ ಪಡಿಸಲು ಆಗುತ್ತಿರುವ ಖರ್ಚೆಷ್ಟು ? ಅದನ್ನು ಭರಿಸುತ್ತಿರುವವರು ಯಾರು ?

Update: 2019-07-08 15:33 GMT

ಪಕ್ಷೇತರ ಶಾಸಕರಾಗಿಯೂ ಮಹತ್ವದ ಕ್ಯಾಬಿನೆಟ್ ಹುದ್ದೆಗಳಲ್ಲಿರುವ ಇಬ್ಬರು ಸಚಿವರು ತಮ್ಮ ಹುದ್ದೆಗೆ ಎಡಕಾಲಲ್ಲಿ ಒದ್ದು ಎದ್ದು ಹೋಗುತ್ತಾರೆ. ಆಡಳಿತ ಪಕ್ಷದವರೇ ಆದ ಇನ್ನಿಬ್ಬರು ಕ್ಯಾಬಿನೆಟ್ ಸಚಿವರು ಕೂಡ ಹುದ್ದೆ ಬಿಟ್ಟು, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಲು ಅಣಿಯಾಗಿದ್ದಾರೆ. ಇವರಲ್ಲದೆ ಸುಮಾರು ಒಂದು ಡಝನ್ ಗೂ ಹೆಚ್ಚು ಶಾಸಕರು ತಾವು ಕೋಟಿಗಟ್ಟಲೆ ದುಡ್ಡು ಚೆಲ್ಲಿ ( ಯಾರಿಗಾದರೂ ಸಂಶಯವಿದೆಯೇ ?) ಗೆದ್ದು ಬಂದ ಶಾಸಕ ಸ್ಥಾನಕ್ಕೆ ಎರಡು ಸಾಲಿನ ರಾಜೀನಾಮೆ ಬಿಸಾಡಿ ಮುಂಬೈ ಸೇರಿಕೊಂಡಿದ್ದಾರೆ. ಹೀಗೆ ಮುಂಬೈಗೆ ಇವರೆಲ್ಲರೂ ಹೋಗಿದ್ದು ವಿಶೇಷ ವಿಮಾನದಲ್ಲಿ ! 

ಆಡಳಿತ ಪಕ್ಷದಲ್ಲಿದ್ದು ಶಾಸಕ ಸ್ಥಾನ ಬೇಡವಾಗುವುದು, ಕ್ಯಾಬಿನೆಟ್ ನಲ್ಲಿದ್ದರೂ ಸಚಿವ ಸ್ಥಾನದಲ್ಲಿ ಆಸಕ್ತಿ ಇಲ್ಲದಾಗುವುದು ಇದೆಲ್ಲ ಹೇಗೆ? ಹಠಾತ್ತನೆ  ಇಷ್ಟೆಲ್ಲಾ ಪ್ರಭಾವ, ಖ್ಯಾತಿ, ಅಧಿಕಾರ ಬೇಡವಾಗುವುದು ಹೇಗೆ? ಜನರಿಗಾಗಿಯೇ? ಕ್ಷೇತ್ರಕ್ಕಾಗಿಯೇ? ಹೌದು ಎಂದು ಹೇಳಿದರೆ ಅದನ್ನು ನಂಬುವ ಮೂರ್ಖರು ಇಲ್ಲಿ ಯಾರಾದರೂ ಇದ್ದಾರೆಯೇ? ಮೊದಲು ಬಿಜೆಪಿ ಸರ್ಕಾರ ಇರುವಾಗ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ಕೊಡುವಾಗ ಆಡಳಿತ ಪಕ್ಷಕ್ಕೆ ಹೋದರೆ ಕ್ಷೇತ್ರ ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ ಎಂಬ ಸಬೂಬು ನೀಡುತ್ತಿದ್ದರು. ಅದನ್ನು ಯಾರೂ ನಂಬಲಿಲ್ಲವಾದರೂ ತೀರಾ ನಂಬಲಸಾಧ್ಯ ಸುಳ್ಳು ಕೂಡ ಆಗಿರಲಿಲ್ಲ. ಆದರೆ ಈಗ?! ಆಡಳಿತ ಪಕ್ಷ ಬಿಟ್ಟು ವಿಪಕ್ಷದೆಡೆಗೆ ಹೋಗುವ ತುಡಿತ ಅಥವಾ ಸಹಿಸಲಸಾಧ್ಯ ಕಡಿತ? ಏನಿದು, ಏಕಿದು? 

ಈ ರೀತಿ ಡಝನ್ ಗಟ್ಟಲೆ ಶಾಸಕರನ್ನು, ಮೂರ್ನಾಲ್ಕು ಸಚಿವರನ್ನೂ ಹೀಗೆ ಸೆಳೆಯಲು ಅಪಾರ ಮೊತ್ತದ ಹಣವಲ್ಲದೆ ಬೇರೆ ಏನಾದರೂ ಕಾರಣ ಇರಲು ಸಾಧ್ಯವೇ? ಬಿಜೆಪಿ ಸರಕಾರ ಮಾಡಿದರೂ ಹೀಗೆ ಬಂದವರಿಗೆಲ್ಲ ಸಚಿವ ಸ್ಥಾನ ನೀಡಲು ಸಾಧ್ಯವೇ ? ಬೇರಾವುದೇ ನಿಗಮ ಸ್ಥಾನ ಕೊಟ್ಟರೂ ಅದರಲ್ಲಿ ಅಷ್ಟು ಲಾಭ ಇದೆಯೇ? ಕೋಟಿ ಕೋಟಿ ದುಡ್ಡಲ್ಲದೆ ಬೇರೆ ಯಾವ ಕಾರಣಕ್ಕೂ ಈ ರೀತಿ ಶಾಸಕರು ತಮ್ಮ ಹುದ್ದೆ ಬಿಟ್ಟು ಹೋಗಲು ಸಾಧ್ಯವೇ? ಸಾಮಾನ್ಯ ಕನಿಷ್ಠ ಜ್ಞಾನವಿರುವ ಯಾರಾದರೂ ಯೋಚನೆ ಮಾಡುವ ವಿಷಯವಲ್ಲವೇ ಇದು ? 

ಇನ್ನು ಈ ನಾಲಾಯಕ್ ಜನಪ್ರತಿನಿಧಿಗಳನ್ನು ಆಗಿಂದಾಗಲೇ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದುಕೊಂಡು ಹೋಗುವುದು, ಅಲ್ಲಿ ಇವರನ್ನು ವಿಲಾಸಿ ತಾರಾ ಹೊಟೇಲುಗಳಲ್ಲಿ ವಾರಗಟ್ಟಲೆ ಇಟ್ಟು ಬೇಕಾದ ವ್ಯವಸ್ಥೆ ಮಾಡಿಕೊಡುವುದು ಇದೆಲ್ಲ ಬಿಟ್ಟಿಯಾಗುತ್ತದೆಯೇ ? ಈ ಎಲ್ಲ ಖರ್ಚು ವೆಚ್ಚ ಭರಿಸುತ್ತಿರುವವರು ಯಾರು ? 

ಈ ಬಗ್ಗೆ ಯಾಕೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರಕಾರ ಹಾಳಾಗಿ ಹೋಗಲಿ. ಈ ಸರಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂಬಂತಹ ಪರಿಸ್ಥಿತಿಯನ್ನು ಈ ಸರಕಾರವೇ ನಿರ್ಮಾಣ ಮಾಡಿದೆ. 

ನಮ್ಮ ಜನಪ್ರತಿನಿಧಿಗಳ ಭ್ರಷ್ಟಾಚಾರ ಎಲ್ಲಿಗೆ ಹೋಗಿ ತಲುಪುತ್ತಿದೆ? ಇದನ್ನು ತಡೆಯಬೇಡವೇ? ಇಷ್ಟೆಲ್ಲಾ ಖರ್ಚು, ವ್ಯವಸ್ಥೆ ತನ್ನಿಂದ ತಾನೇ ಆಗುತ್ತಿದೆಯೇ ? ಒಂದು ವ್ಯವಸ್ಥಿತ ತಂಡ ಇದರ ಹಿಂದಿಲ್ಲವೇ ? ಅದರ ಸೂತ್ರಧಾರಿಗಳು ಯಾರು ? ಅವರ ಉದ್ದೇಶ ಏನು ? ಅವರಿಗೆ ಇಷ್ಟೆಲ್ಲಾ ದುಡ್ಡು ಎಲ್ಲಿಂದ ಬರುತ್ತಿದೆ?  ಕೊನೆಗೆ ಕನ್ನ ಬೀಳುವುದು ಎಲ್ಲಿಗೆ? ಆ ಬಗ್ಗೆ ಯಾಕೆ ಯಾರೂ ತಲೆಕೆಡಿಸಿಕೊಂಡಿಲ್ಲ ? 

ರಾಜ್ಯದ ಹೈಕೋರ್ಟ್, ಸುಪ್ರೀಂ ಕೋರ್ಟ್ ಈ ಬಗ್ಗೆ ಯಾಕೆ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬಾರದು ? ಇದರ ಹಿಂದಿರುವವರನ್ನು ಯಾಕೆ ಪತ್ತೆ ಹಚ್ಚಬಾರದು ? 

ನಮ್ಮ ರಾಜ್ಯಕ್ಕೆ ತಗುಲಿರುವ ಈ ಅನಿಷ್ಠವನ್ನು ಇನ್ನಾದರೂ ತಡೆದು ಇದರ ಹಿಂದಿರುವವರನ್ನು ಶಿಕ್ಷಿಸಲೇಬೇಕು ! 

Writer - ಎಂ. ನಾಗರಾಜ್ , ಮೈಸೂರು

contributor

Editor - ಎಂ. ನಾಗರಾಜ್ , ಮೈಸೂರು

contributor

Similar News