ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 3ಡಿ ಡಿಜಿಟಲ್ ಕಲಿಕೆ, ಎಐ ಆಧಾರಿತ ರೋಗಿ ಕಲಿಕೆ ತಂತ್ರಜ್ಞಾನ ಅಳವಡಿಕೆ

Update: 2019-07-09 06:01 GMT

ಅಜ್ಮನ್, ಜು.8: ಕೊಲ್ಲಿ ರಾಷ್ಟ್ರಗಳಲ್ಲಿಯೇ ಇದೇ ಮೊದಲ ಬಾರಿ 'ಗಲ್ಫ್ ಮೆಡಿಕಲ್ ಯುನಿವರ್ಸಿಟಿ'ಯಲ್ಲಿ 3ಡಿ ಡಿಜಿಟಲ್ ಕಲಿಕಾ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈ ನೂತನ ತಂತ್ರಜ್ಞಾನವು ಮುಖ್ಯವಾಗಿ ಮೂಲ ವೈದ್ಯಕೀಯ ವಿಜ್ಞಾನ, ಅಂಗರಚನೆ ಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ಮುಂತಾದ ವೈದ್ಯಕೀಯ ಶಿಕ್ಷಣ ಆಯಾಮಗಳನ್ನು 5.1 ಸರೌಂಡ್ ಸೌಂಡ್‌ನೊಂದಿಗೆ ಉನ್ನತ ಧೃಶ್ಯ ಗುಣಮಟ್ಟದ 3ಡಿ ತಂತ್ರಜ್ಞಾನದಲ್ಲಿ ಪ್ರದರ್ಶಿಸಲಿದೆ. ಈ ತಂತ್ರಜ್ಞಾನ ಸಂಕೀರ್ಣ ವೈದ್ಯಕೀಯ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಸರಳ ರೀತಿಯಲ್ಲಿ ಮತ್ತು ಆಳವಾದ ದೃಷ್ಟಿಕೋನದೊಂದಿಗೆ ವಿವರಿಸಲಿದೆ.

ಇದು ಅಂಗರಚನೆಶಾಸ್ತ್ರ, ರೋಗಪತ್ತೆಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಹಾಗೂ ನೂತನ ಸುಧಾರಿತ ವಿಜ್ಞಾನಗಳಲ್ಲಿ ವರ್ಚುವಲ್ ಮೈಕ್ರೊಸ್ಕೋಪಿ ಬಳಸಲಿದೆ. ವಿಷಯ, ಆ್ಯನಿಮೇಶನ್ ಮತ್ತು 3ಡಿ ಸ್ಟೀರಿಯೊಸ್ಕೊಪಿಯಿಂದಾಗಿ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗುತ್ತಾರೆ ಜೊತೆಗೆ ರಚನೆಗಳನ್ನು ತಿಳಿಯಲು ಮತ್ತು ಅವುಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ.

ಈ ಕುರಿತು ಮಾತನಾಡಿದ ಜಿಎಂಯು ಕುಲಪತಿ ಪ್ರೊ.ಹೊಸಮ್ ಹಮ್ದಿ, ನೂತನ 3ಡಿ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಸುಧಾರಿತ ಕಲಿಕಾ ಅನುಭವ ದೊರೆಯುತ್ತದೆ, ಅವರು ಮಾನವ ದೇಹದ ಸಂಕೀರ್ಣತೆಯಲ್ಲಿ ಹೆಚ್ಚು ಮುಳುಗುವಂತೆ ಮಾಡುತ್ತದೆ ಮತ್ತು ವೈದ್ಯಕೀಯ ವಿಜ್ಞಾನವನ್ನು ಹೊಸ ರೀತಿಯಲ್ಲಿ ನೋಡುವ ಮತ್ತು ವಿಶ್ಲೇಷಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣ ತಂತ್ರಜ್ಞಾನ ಕೇಂದ್ರಿತವಾಗಿರಲಿದೆ ಮತ್ತು ಜಿಎಂಯು ನಾಳೆಯ ತಂತ್ರಜ್ಞಾನವನ್ನು ಇಂದೇ ಅಳವಡಿಸಿಕೊಳ್ಳುತ್ತಿದೆ. ಹಾಗಾಗಿ ನಾವು ಭವಿಷ್ಯದ ದೃಷ್ಟಿಕೋನ ಮತ್ತು ಕೌಶಲ್ಯ ಹೊಂದಿರುವ ವೈದ್ಯಕೀಯ ವೃತ್ತಿಪರರನ್ನು ಸೃಷ್ಟಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಎಂಯು ಶೈಕ್ಷಣಿಕ ಉಪಕುಲಪತಿ ಪ್ರೊ.ಮಂದ ವೆಂಕಟರಮಣ, ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಉಪನ್ಯಾಸಕರಿಗೂ ಕಲಿಕಾ ವಿಧಾನಗಳಲ್ಲಿ ಸಹಾಯವಾಗುತ್ತದೆ. ಗುಣಮಟ್ಟದ ಕಲಿಕೆಗಾಗಿ ವಿಶ್ವವಿದ್ಯಾನಿಲಯದಲ್ಲಿ ಸಾರ್ಟ್ ಕೊಠಡಿಗಳಿವೆ. ವಿಶ್ವವಿದ್ಯಾನಿಲಯ ಈಗಾಗಲೇ ಕೃತಕ ಬುದ್ಧಿಮತ್ತೆ ಆಧಾರಿತ ವರ್ಚುವಲ್ ರೋಗಿ ಕಲಿಕಾ (ವಿಪಿಎಲ್) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಅಳವಡಿಸಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News