ರೆಸಾರ್ಟ್ ರಾಜಕಾರಣದ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

Update: 2019-07-09 15:17 GMT

ಬೆಂಗಳೂರು, ಜು.9: ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ಕ್ಷಣದಿಂದ ರಾಜ್ಯದಲ್ಲಿ ಕ್ಷುಲ್ಲಕ ರಾಜಕಾರಣ ನಡೆಯುತ್ತಲೇ ಇದೆ. ಆಳುತ್ತಿರುವ ಪಕ್ಷಗಳು ಶಾಸಕರು ತಮ್ಮನ್ನು ತಾವು ಮಾರಾಟಕ್ಕಿಟ್ಟುಕೊಂಡಂತೆ ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಮತದಾರರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕೆ.ಆರ್.ಪುರದಲ್ಲಿರುವ ಬಿಬಿಎಂಪಿ ಕಚೇರಿ ಎದುರು ಶಾಸಕರ ರೆಸಾರ್ಟ್ ರಾಜಕಾರಣದ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಪೂರ್ವ ವಲಯ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಸಕರ ಈ ಬೇಜವಾಬ್ದಾರಿತನ ಖಂಡನೀಯ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಬೆದರಿಕೆ ಒಡ್ಡುವುದು, ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ಅಡ್ಡದಾರಿ ಬಳಸಿ ಸರಕಾರಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಗೌರಮ್ಮ ಹೇಳಿದರು.

ರಾಜ್ಯದಲ್ಲಿ ಜವಾಬ್ದಾರಿಯುತವಾದ ಪ್ರತಿಪಕ್ಷವಾಗಿ ಸರಕಾರದ ವೈಫಲ್ಯಗಳನ್ನು ಬಯಲಿಗೆಳೆಯುತ್ತ, ಬರಗಾಲ, ಬೆಲೆ ಏರಿಕೆ, ರೈತರ ಆತ್ಮಹತ್ಯೆ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಪರಿಹಾರ ಸೂಚಿಸುವುದನ್ನು ಬಿಟ್ಟು, ಬಿಜೆಪಿಯವರು ಸರಕಾರವನ್ನು ಅಸ್ತಿರಗೊಳಿಸುವ ಸಂಚನ್ನು ಮೊದಲ ದಿನದಿಂದಲೂ ರೂಪಿಸುತ್ತಿದೆ ಎಂದು ಅವರು ಆರೋಪಿಸಿದರು.

ಭೀಕರ ಬರಗಾಲದಿಂದ ಕುಡಿಯುವ ನೀರೂ ಇಲ್ಲದೆ, ಜನ ಕಂಗಾಲಾಗಿದ್ದಾರೆ. ಜಾನುವಾರುಗಳು ಸಾಯುತ್ತಿವೆ. ಕೈ ಕೊಟ್ಟ ಮುಂಗಾರಿನಿಂದ ರೈತರು ಹತಾಶರಾಗುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಕೈ ಜೋಡಿಸಿ ಮತ ಕೇಳಲು ಬಂದವರು, ಈಗ ಜನರ ಬವಣೆಗಳಿಗೆ ಬೆನ್ನು ಹಾಕಿ ಸ್ವ ಹಿತಾಸಕ್ತಿಯಿಂದ ರೆಸಾರ್ಟ್ ರಾಜಕಾರಣಕ್ಕಿಳಿದ ಶಾಸಕರಿಗೆ ಧಿಕ್ಕಾರ ಹೇಳದೇ ವಿಧಿಯಿಲ್ಲ. ವಿಧಾನಸಭಾಧ್ಯಕ್ಷರು ಪ್ರಜಾತಂತ್ರದ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಗೌರಮ್ಮ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪೂರ್ವ ವಲಯ ಸಮಿತಿ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಅನಿತಾ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಪೂರ್ವ ವಲಯ ಸಮಿತಿಯ ಅಧ್ಯಕ್ಷ ಎಚ್.ಎನ್.ಗೋಪಾಲಗೌಡ, ಕಾರ್ಯದರ್ಶಿ ಸಿ.ಮುನಿರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News