ಸೆಮಿ ಫೈನಲ್‌ನಲ್ಲಿ ಆಡುವ ಅವಕಾಶ ವಂಚಿತ ಮುಹಮ್ಮದ್ ಶಮಿ

Update: 2019-07-10 03:20 GMT

ಮ್ಯಾಂಚೆಸ್ಟರ್, ಜು.9: ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತದ ಹ್ಯಾಟ್ರಿಕ್ ಹೀರೊ ಮುಹಮ್ಮದ್ ಶಮಿ ಅವರಿಗೆ ಟೀಮ್ ಇಂಡಿಯಾದ ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ಸಿಗಲಿಲ್ಲ.

    ಟೀಮ್ ಮ್ಯಾನೇಜ್‌ಮೆಂಟ್ ಶಮಿಗೆ ಮತ್ತೆ ವಿಶ್ರಾಂತಿ ನೀಡಿ ಭುವನೇಶ್ವರ್ ಕುಮಾರ್‌ನ್ನು ಕಣಕ್ಕಿಳಿಸಿದೆ. ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಶಮಿ. ಅವರು ಅಫ್ಘಾನಿಸ್ತಾನ ವಿರುದ್ಧ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಉಡಾಯಿಸಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಚೇತನ್ ಶರ್ಮಾ 1987ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಆ ಬಳಿಕ 32 ವರ್ಷಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದರು ಶಮಿ.

29ರ ಹರೆಯದ ಶಮಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರೂ, ಅವರಿಗೆ ಸೆಮಿಫೈನಲ್‌ನಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂಡಿತರು ಟ್ವ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಶಮಿ ಅಫ್ಘಾನಿಸ್ತಾನ ವಿರುದ್ಧ 40ಕ್ಕೆ 4, ವಿಂಡೀಸ್ ವಿರುದ್ಧ 16ಕ್ಕೆ 4, ಇಂಗ್ಲೆಂಡ್ ವಿರುದ್ಧ 69ಕ್ಕೆ 5 ಮತ್ತು ಬಾಂಗ್ಲಾ ವಿರುದ್ಧ 68ಕ್ಕೆ 1 ವಿಕೆಟ್ ಪಡೆದಿದ್ದರು. 4 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿರುವ ಶಮಿ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

    ಶಮಿ ಅವರನ್ನು ಕೈ ಬಿಟ್ಟಿರುವುದಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗುಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಶಮಿ ಆಡಿರಲಿಲ್ಲ. ಆ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News