ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ ಯತ್ನ: ಪೊಲೀಸ್ ವಶಕ್ಕೆ

Update: 2019-07-10 16:42 GMT

ಬೆಂಗಳೂರು, ಜು.10: ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ, ದಿನೇಶ್‌ಗುಂಡೂರಾವ್, ಗುಲಾಂ ನಬಿ ಆಝಾದ್, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್-ಜೆಡಿಎಸ್‌ನ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಬುಧವಾರ ರಾಜ್ಯಪಾಲ ವಜುಭಾಯಿ ವಾಲಾ ನಿಲುವುಗಳು ತಾರತಮ್ಯದಿಂದ ಕೂಡಿದೆ. ಇದರಿಂದಾಗಿ ಮೈತ್ರಿ ಸರಕಾರ ಸಮಸ್ಯೆಗೆ ಈಡಾಗಿದೆ. ಹೀಗಾಗಿ ರಾಜ್ಯಪಾಲರು ನ್ಯಾಯಪರವಾದ ನಿಲುವುಗಳನ್ನು ತಾಳಬೇಕೆಂದು ಒತ್ತಾಯಿಸಿ ರಾಜ್ಯಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಮಾರ್ಗ ಮಧ್ಯೆದಲ್ಲಿಯೇ ತಡೆದರು. ಇದರಿಂದ ಕುಪಿತಗೊಂಡ ಸಿದ್ದರಾಮಯ್ಯ, ಗುಲಾಂ ನಬಿ ಆಝಾದ್ ಸೇರಿ ಹಲವು ನಾಯಕರು ರಸ್ತೆ ಮಧ್ಯೆದಲ್ಲಿಯೆ ಕುಳಿತು ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಬಿಜೆಪಿಯ ಅಸಂವಿಧಾನಿಕ ನಡೆಯನ್ನು ಖಂಡಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ನಗರದ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಇದರಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ವಕ್ತಾರ ಗುಲಾಂ ನಬಿ ಆಝಾದ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗವಹಿಸಿ, ಪ್ರತಿಭಟನಾಕಾರರಿಗೆ ಹುರುಪು ತುಂಬಿದರು.

ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಅಸಂವಿಧಾನಿಕ ನಡೆಯ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ದೃತಿಗೆಡಬಾರದು. ಬದಲಿಗೆ, ಬಿಜೆಪಿ ನಾಯಕರು ವಿರುದ್ಧ ನಿರಂತರ ಹೋರಾಟಕ್ಕೆ ಮುಂದಾಗಬೇಕೆಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಲಜ್ಜೆಗೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರ ಕುತಂತ್ರ ರಾಜಕಾರಣದಿಂದಾಗಿ ದೇಶದ ಪ್ರಜಾಪ್ರಾಭುತ್ವ ಅಪಾಯದ ಸ್ಥಿತಿಯಲ್ಲಿದೆ. ಇವರ ವಿರುದ್ಧ ಜನತೆ ಬೀದಿಗಿಳಿಯಲಿದ್ದಾರೆಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಬಿಜೆಪಿ ನಾಯಕರು ಕಳೆದ ಒಂದು ವರ್ಷದಿಂದ ಇದು 6ನೇ ಬಾರಿ ಮೈತಿ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಬಿಜೆಪಿಯನ್ನು ರಾಜ್ಯದ ಜನತೆ ನಿರಾಕರಿಸಿದ್ದಾರೆ. ಅದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾರವರ ಸೂಚನೆಯ ಮೇರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಮುಂಬೈನಲ್ಲಿ ಅಡಗಿಸಿಡಲಾಗಿದೆ. ಆ ಮೂಲಕ ಬಿಜೆಪಿ ಪ್ರಜಾಪ್ರಾಭುತ್ವ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ ಎಂದು ಕಿಡಿಕಾರಿದರು.

ಆಪರೇಷನ್ ಕಮಲದ ಮೂಲಕ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಯೆ ಸೂಕ್ತ ತೀರ್ಮಾನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News