ಅತೃಪ್ತ ಶಾಸಕರಿಂದ ಮತ್ತೊಮ್ಮೆ ರಾಜೀನಾಮೆ ಸಲ್ಲಿಕೆ

Update: 2019-07-11 17:19 GMT

ಬೆಂಗಳೂರು, ಜು.11: ಎಂಟು ಮಂದಿ ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದ ಹಿನ್ನೆಲೆಯಲ್ಲಿ ಮುಂಬೈನಲ್ಲಿದ್ದ ಅತೃಪ್ತ ಶಾಸಕರು ಇಂದು ಸ್ಪೀಕರ್ ಅವರನ್ನು ಖುದ್ದು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ಸಲ್ಲಿಸಿ ಮುಂಬೈನ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್-ಜೆಡಿಎಸ್ ನ 11 ಶಾಸಕರು ಇಂದು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ರಮೇಶ್ ಕುಮಾರ್ಗೆ ಕೈ ಬರಹದ ರಾಜೀನಾಮೆ ಪತ್ರ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು ?

ಶಾಸಕ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶ ನೀಡುವಂತೆ ಕೋರಿ 10 ಅತೃಪ್ತ ಶಾಸಕರು ಬುಧವಾರ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಬೆಳಿಗ್ಗೆ ತುರ್ತು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪೀಠವು,ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಲು ಸಂಜೆ ಆರು ಗಂಟೆಗೆ ಸ್ಪೀಕರ್‌ರನ್ನು ಭೇಟಿಯಾಗಲು ಈ ಶಾಸಕರಿಗೆ ಅನುಮತಿ ನೀಡಿದ್ದರು.

ಇದೇ ವೇಳೆ ಶಾಸಕರು ಸಲ್ಲಿಸಿರುವ ರಾಜೀನಾಮೆಗಳ ಕುರಿತು ಇಂದೇ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಶುಕ್ರವಾರ ತನಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ್ ಬೋಸ್ ಅವರನ್ನೂ ಒಳಗೊಂಡಿದ್ದ ಪೀಠವು ಸ್ಪೀಕರ್‌ಗೆ ಸೂಚಿಸಿತ್ತು.

ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರು ತಲುಪಿದಾಗ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಅವರಿಗೆ ರಕ್ಷಣೆಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕದ ಡಿಜಿಪಿಗೆ ಆದೇಶವನ್ನೂ ನೀಡಿತ್ತು.

 ಅತೃಪ್ತ ಶಾಸಕರ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು,ಕರ್ನಾಟಕ ವಿಧಾನಸಭೆಯ ಅಧಿವೇಶನ ಜು.12ರಂದು ನಡೆಯಲಿದೆ,ಆದರೆ ಅದಕ್ಕೂ ಮೊದಲೇ ಆಡಳಿತ ಮೈತ್ರಿಕೂಟವು ಬಂಡುಕೋರ ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ಸಲ್ಲಿಸಿದೆ ಎನ್ನುವುದನ್ನು ಪೀಠದ ಗಮನಕ್ಕೆ ತಂದರು.

ಸದನದಲ್ಲಿ ಬಲಾಬಲ ಪರೀಕ್ಷೆಗೆ ಆದೇಶಿಸುವ ಬದಲು ಬಂಡುಕೋರ ಶಾಸಕರನ್ನು ಅನರ್ಹಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ರಾಜೀನಾಮೆ ನೀಡಲು ಮತ್ತು ಜನರಿಂದ ಪುನರಾಯ್ಕೆಯನ್ನು ಕೋರಲು ಬಯಸಿದ್ದೇವೆ ಎಂದು ಶಾಸಕರ ಪರವಾಗಿ ರೋಹಟ್ಗಿ ನಿವೇದಿಸಿಕೊಂಡರು.

ಜು.1ರಿಂದ ನಡೆದ ಘಟನಾವಳಿಗಳನ್ನು ರೋಹಟ್ಗಿ ವಿವರಿಸಿದಾಗ,‘ಯಾವುದೂ ನಮಗೆ ಅಚ್ಚರಿ ಮೂಡಿಸುವುದಿಲ್ಲ’ ಎಂದು ಪೀಠವು ಅಭಿಪ್ರಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News