ಐಎಂಎ ಸಂಸ್ಥೆ ದತ್ತು ಪಡೆದುಕೊಂಡಿದ್ದ ಶಾಲೆಯ ನಿರ್ವಹಣೆ ಜವಾಬ್ದಾರಿ ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಗೆ

Update: 2019-07-11 14:53 GMT

ಬೆಂಗಳೂರು, ಜು.11: ಐಎಂಎ ಸಂಸ್ಥೆಯು ದತ್ತು ಪಡೆದುಕೊಂಡಿದ್ದ ಶಿವಾಜಿನಗರ ದಲ್ಲಿರುವ ವಿ.ಕೆ.ಉಬೇದುಲ್ಲಾ ಸರಕಾರಿ ಉರ್ದು ಶಾಲೆಯ ನಿರ್ವಹಣೆಯ ಜವಾಬ್ದಾರಿಯನ್ನು ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ಖಾದ್ರಿ ದರ್ಗಾ ಸಮಿತಿ ವಹಿಸಿಕೊಂಡಿದೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ಮೇ 29ರಂದು ನಡೆದ ವಕ್ಫ್ ಬೋರ್ಡ್ ಸಭೆಯಲ್ಲಿ ವಿ.ಕೆ.ಉಬೇದುಲ್ಲಾ ಶಾಲೆಯನ್ನು ದತ್ತು ಪಡೆಯುವ ವಿಚಾರದ ಕುರಿತು ಚರ್ಚೆ ನಡೆಸಿ, ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ಖಾದ್ರಿ ದರ್ಗಾಗೆ ಶಾಲೆಯ ಜವಾಬ್ದಾರಿಯನ್ನು ವಹಿಸಲು ನಿರ್ಧರಿಸಲಾಗಿತ್ತು. ಅದರಂತೆ, ಜು.8ರಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ದರ್ಗಾ ಶಾ ಖಾದ್ರಿ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಅವರಿಗೆ ಪತ್ರ ಬರೆದು, ವಕ್ಫ್ ಬೋರ್ಡ್ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ತಿಳಿಸಿದ್ದರು.

ವಕ್ಫ್ ಬೋರ್ಡ್ ವಿ.ಕೆ.ಉಬೇದುಲ್ಲಾ ಶಾಲೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ನಮ್ಮ ಸಮಿತಿಗೆ ವಹಿಸಿಕೊಳ್ಳುವಂತೆ ಕೋರಲಾಗಿತ್ತು. ಅದರಂತೆ, ಸುಮಾರು 1600 ಮಕ್ಕಳ ಭವಿಷ್ಯದ ದೃಷ್ಟಿಯಿಂದ, ವಕ್ಫ್ ಬೋರ್ಡ್ ಕೋರಿಕೆಯನ್ನು ನಮ್ಮ ಸಮಿತಿ ಒಪ್ಪಿಕೊಂಡಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.

‘ವಾರ್ತಾಭಾರತಿ’ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ವಿ.ಕೆ.ಉಬೇದುಲ್ಲಾ ಶಾಲೆಯನ್ನು ನಿರ್ವಹಿಸಲು ಪ್ರತಿ ತಿಂಗಳು ಲಕ್ಷಾಂತರ ರೂ.ಖರ್ಚಾಗುತ್ತದೆ. ವಕ್ಫ್ ಬೋರ್ಡ್ ಅಧೀನದಲ್ಲಿರುವ ನಮ್ಮ ಸಂಸ್ಥೆಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ, ಮಕ್ಕಳ ಭವಿಷ್ಯಕ್ಕಾಗಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ ಎಂದರು.

ನಮ್ಮ ಹಮೀದ್ ಶಾ ದರ್ಗಾ ಸಮಿತಿಯ ಪ್ರಮುಖ ಉದ್ದೇಶವೇ ಶಿಕ್ಷಣಕ್ಕೆ ಮಹತ್ವ ನೀಡುವುದು. ಮೊದಲು ಶಾಲೆಯ ಶಿಕ್ಷಕರ ವೇತನವನ್ನು ಪಾವತಿಸಬೇಕಿದೆ. ಅವರೆಲ್ಲ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅದೇ ರೀತಿ, ಪೋಷಕರು ಹಾಗೂ ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ. ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನ ಮಾಡುತ್ತೇವೆ ಎಂದು ಜಿ.ಎ.ಬಾವಾ ಹೇಳಿದರು.

ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಸಂಬಂಧ ಈಗಾಗಲೇ, ವಕ್ಫ್ ಬೋರ್ಡ್‌ನ ಸಿಇಓ ಇಸ್ಲಾಹುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ, ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಡಾ.ಪಿ.ಸಿ.ಜಾಫರ್, ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ, ಶಿಕ್ಷಣ ತಜ್ಞರೊಂದಿಗೆ ಸೇರಿ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News