ಐಎಂಎ ವಂಚನೆ ಪ್ರಕರಣ: ಜು.15ಕ್ಕೆ ರೋಷನ್ ಬೇಗ್ ವಿಚಾರಣೆ ?

Update: 2019-07-11 16:11 GMT

ಬೆಂಗಳೂರು, ಜು.11: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಅಮಾನತು ಆಗಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್‌ಗೆ ಜು.15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಟ್ ಸೂಚಿಸಿದೆ ಎಂದು ತಿಳಿದುಬಂದಿದೆ.

ಗುರುವಾರ(ಜು.11) ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಿಟ್ ನೋಟಿಸ್ ನೀಡಿತ್ತು. ಆದರೆ, ರೋಷನ್ ಬೇಗ್, ಅನಾರೋಗ್ಯ ಕಾರಣ ನೀಡಿ, ವಿಚಾರಣೆ ಹಾಜರಾಗಿಲ್ಲ. ಹಾಗಾಗಿ, ಜು.15ಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸಿಟ್ ತನಿಖಾಧಿಕಾರಿಯೊಬ್ಬರು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಐಎಂಎ ಸಮೂಹ ಸಂಸ್ಥೆಯ ಮುಖ್ಯಸ್ಥ ಮನ್ಸೂರ್‌ ಖಾನ್ ಪರಾರಿಯಾಗುವ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಶಾಸಕ ರೋಷನ್ ಬೇಗ್ ಅವರ ಬಳಿ ತನ್ನ ಕೋಟ್ಯಂತರ ರೂಪಾಯಿ ಹಣ ಇದೆ ಸೇರಿದಂತೆ ಹಲವು ವಿಷಯಗಳ ಕುರಿತು ಗಂಭೀರ ಆರೋಪ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಟ್ ಅಧಿಕಾರಿಗಳು ಮನ್ಸೂರ್‌ ಖಾನ್ ವಿಡಿಯೊ ಮತ್ತು ಆತನ ಬ್ಯಾಂಕ್ ಖಾತೆಗಳ ಹಣ ವರ್ಗಾವಣೆ ಮಾಹಿತಿ ಆಧರಿಸಿ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ, ಇದೀಗ ರೋಷನ್ ಬೇಗ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಹೇಮಂತ್ ನಿಂಬಾಳ್ಕರ್ ವರದಿ ?

ಐಎಂಎ ಸಮೂಹ ಸಂಸ್ಥೆಯ ಪರವಾಗಿ ಸದ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಐಜಿಪಿಯಾಗಿರುವ ಹೇಮಂತ್ ನಿಂಬಾಳ್ಕರ್ ಅವರು ವರದಿಯೊಂದನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.

2017 ರಲ್ಲಿಯೇ ಆರ್‌ಬಿಐ ಪ್ರಧಾನ ವ್ಯವಸ್ಥಾಪಕರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ತನಿಖೆ ನಡೆಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸರಕಾರ ಸೂಚಿಸಿತ್ತು. ಪ್ರರಣದ ತನಿಖೆಯನ್ನು ಅಂದಿನ ಸಿಐಡಿ (ಆರ್ಥಿಕ ಅಪರಾಧಗಳು) ಪೊಲೀಸ್ ಮಹಾನಿರೀಕ್ಷಕರಾಗಿದ್ದ ಹೇಮಂತ್ ನಿಂಬಾಳ್ಕರ್‌ಗೆ ವಹಿಸಿತ್ತು. ತನಿಖೆ ನಡೆಸಿದ ಹೇಮಂತ್ ನಿಂಬಾಳ್ಕರ್ ತಮ್ಮ ಅಂತಿಮ ವರದಿ ನೀಡಿದ್ದರು ಎನ್ನಲಾಗಿದೆ.

ಕಳೆದ ಜನವರಿ ತಿಂಗಳಿನಲ್ಲಿ ಸಂಸ್ಥೆಯ ಪರವಾಗಿ ವರದಿ ನೀಡಿದ್ದು, ಸಂಸ್ಥೆಯ ವಿರುದ್ಧ ಕ್ರಮ ಜರುಗಿಸುವ ಕಾನೂನಿನಲ್ಲಿ ಅವಕಾಶವಿಲ್ಲವೆಂದು ವರದಿ ಉಲ್ಲೇಖಿಸಿದ್ದೂ ಅಲ್ಲದೆ, ಅರ್ಜಿಯ ವಿಚಾರಣೆಯನ್ನೂ ಮುಕ್ತಾಯಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News